ಹುಬ್ಬಳ್ಳಿ

ಅಜ್ಞಾನ ಕತ್ತಲೆಯ ಸಂಕೇತವಾದರೆ, ಜ್ಞಾನ ಬೆಳಕಿನ ಸಂಕೇತವಾಗಿದೆ. ಹೊರಗಿನ ಕತ್ತಲೆ ಕಳೆಯಲು ಹೇಗೆ ಸೂರ್ಯ ಅಗತ್ಯವಿದೆಯೋ ಒಳಗಿನ ಕತ್ತಲೆ ಕಳೆಯಲು ಗುರುವಿನ ಅವಶ್ಯಕತೆಯೋ ಅಷ್ಟೇ ಇದೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ವಿದ್ಯಾನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸುಖ ಸಮೃದ್ಧಿ ಬದುಕಿಗಾಗಿ ಮನುಷ್ಯ ಪ್ರಯತ್ನಶೀಲನಾಗಿ ಕೆಲಸ ಮಾಡಬೇಕಾಗುತ್ತದೆ. ದೇವರು ಧರ್ಮ ಗುರುವಿನ ಮಾರ್ಗದರ್ಶನದಲ್ಲಿ ಬದುಕನ್ನು ಸಮೃದ್ಧಿಗೊಳಿಸುವ ಅಗತ್ಯವಿದೆ. ಬುದ್ಧಿ ಬೆಳೆದರೂ ಭಾವನೆ ಬೆಳೆಯಲಾರದ್ದೆ ಇಂದಿನ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.

ಜ್ಯೋತಿ ಬೆಳಗಿಸಿ ಧರ್ಮ ಸಮಾರಂಭ ಉದ್ಘಾಟಿಸಿದ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್‌ ಅವರು ಮಾತನಾಡಿ ಜನ ಸಮುದಾಯದಲ್ಲಿ ಧಾರ್ಮಿಕ ಶ್ರದ್ಧೆ ಬೆಳೆಸುವ ಅವಶ್ಯಕತೆಯಿದೆ. ಬದುಕಿನಲ್ಲಿ ಉಜ್ವಲ ಬೆಳಕು ಕಾಣಬೇಕಾದರೆ ಪರಿಶ್ರಮ ಮತ್ತು ಸಾಧನೆ ಮಾಡಬೇಕಾಗುತ್ತದೆ. ಜನರಲ್ಲಿ ಮನೆ ಮಾಡಿರುವ ಅಜ್ಞಾನ ದೂರವಾಗಿ ಜ್ಞಾನ ಜ್ಯೋತಿ ಬೆಳಗಲೆಂದು ಆಶಿಸಿದರು.

ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮತ್ತು ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತರಾದ ಲೋಚನೇಶ ಹೂಗಾರ, ಮೋಹನ ಹೆಗಡೆ, ರಾಜು ಬಿಜಾಪೂರ ಹಾಗೂ ಶರಣು ಹಿರೇಮಠ, ಸಹಜಾ ಜಯಕುಮಾರ, ಪ್ರತೀಕ ಐತಾಳ, ವಿಜಯಲಕ್ಷ್ಮಿ ಇಂಗಳಗಿ, ಸಾಯಿಕುಮಾರ ಸಾಧುನವರ ಮತ್ತು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ಮನೋಹರ ಬೇವಿನಮರ, ರಾಘವೇಂದ್ರ ರೇಣುಕೆ ಸೇರಿದಂತೆ ಅನೇಕರು ಇದ್ದರು. ವಿಶ್ವನಾಥ ಹಿರೇಗೌಡರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ವಿ ಹಿರೇಮಠ ನಿರೂಪಿಸಿದರು.

ವೀರಶೈವ, ಲಿಂಗಾಯತ ಒಂದೇ

ಸಚಿವ ಡಿ.ಕೆ. ಶಿವಕುಮಾರ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ರಂಭಾಪುರ ಶ್ರೀಗಳ ಸಮ್ಮುಖದಲ್ಲಿ ನಮ್ಮಿಂದ ತಪ್ಪಾಗಿದೆ ಎಂದು ಕೇಳಿಕೊಳ್ಳುವ ಮೂಲಕ ಮೂಲಕ ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಕೆಲಸ ಮಾಡಿದ್ದೇವೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂದು ಧರ್ಮ ರಾಜಕಾರಣ ಮಾಡಿದವರು ಇಂದು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದರು.

:

LEAVE A REPLY

Please enter your comment!
Please enter your name here