ಶಿವಮೊಗ್ಗ : ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯು ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ರಂಗರೂಪಕ್ಕಿಳಿಸಿ ಜನಮನ್ನಣೆ ಗಳಿಸಿದರೆ, ಮೈಸೂರು ರಂಗಾಯಣವು ಕುವೆಂಪು ಅವರ ಶ್ರೀ ರಾಮಯಣ ದರ್ಶನಂ ಮಹಾಕಾವ್ಯವನ್ನೇ ರಂಗರೂಪಕ್ಕಿಳಿಸಿ ಮಹೋನ್ನತ ದಾಖಲೆ ನಿರ್ಮಿಸಿದೆ.

ಬೃಹತ್‌ ಕಾದಂಬರಿಗಳು, ಮಹಾಕಾವ್ಯಗಳನ್ನು ಮೂಲ ಕೃತಿಯ ಆಶಯಕ್ಕೆ ಭಂಗವಾಗದಂತೆ ನಾಟಕ ರೂಪಕ್ಕೆ ತರುವುದು ಎಂದರೆ ಅದೊಂದು ದೊಡ್ಡ ಸಾಹಸವೆ ಸರಿ. ರಾಷ್ಟ್ರೀಯ ನಾಟಕ ಶಾಲೆಯು ಮಲೆಗಳಲ್ಲಿ ಮದುಮಗಳು ನಾಟಕವನ್ನು 7ಗಂಟೆ ಅವಧಿಗೆ ಆಹೋರಾತ್ರಿ ಪ್ರದರ್ಶನ ಮಾಡಿದರೆ, ರಂಗಾಯಣವು ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು 5ಗಂಟೆಯಲ್ಲಿ ತೋರಿಸುವ ಪ್ರಯತ್ನ ನಡೆಸಿದೆ.

ಶಿವಮೊಗ್ಗದಲ್ಲಿ ಅಹೋರಾತ್ರಿ ಯಕ್ಷಗಾನ ಪ್ರದರ್ಶನಗಳನ್ನು ಕಂಡಿದ್ದೇವೆ. ಆದರೆ, ವೃತ್ತಿ ರಂಗಭೂಮಿಯಲ್ಲಿ ಸುದೀರ್ಘ 5ಗಂಟೆ ಅವಧಿ ನಾಟಕ ಪ್ರದರ್ಶನ ಇದೂವರೆಗೆ ಕಂಡಿಲ್ಲ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದು 50ವರ್ಷ ತುಂಬಿದ ಸವಿನೆನಪಿಗಾಗಿ ಮಹಾಕಾವ್ಯವನ್ನು ರಂಗರೂಪಕ್ಕೆ ಇಳಿಸಲಾಗಿದೆ. ರಾಜ್ಯದ ವಿವಿಧೆಡೆ ಈಗಾಗಲೆ 8 ಪ್ರದರ್ಶನ ಕಂಡಿರುವ ಈ ಮಹೋನ್ನತ ದೃಶ್ಯಕಾವ್ಯವನ್ನು ಶಿವಮೊಗ್ಗದ ನಾಟಕ ಅಭಿಮಾನಿಗಳು, ರಂಗ ಕಲಾವಿದರು ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಾಗಿದೆ. ಡಿ.5 ಮತ್ತು 6ರಂದು ಸಂಜೆ 6ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ಶ್ರೀ ರಾಮಾಯಣ ದರ್ಶನಂ ಕೃತಿಯನ್ನು 250 ಪುಟಕ್ಕೆ ಮಿತಿಗೊಳಿಸಿ ತಜ್ಞ ಕಲಾವಿದರು ಹಾಗೂ ಸಂಭಾಷಣಕಾರರು ಕೃತಿಯ ಮೂಲ ಆಶಯಕ್ಕೆ ಧಕ್ಕೆ ಬರದಂತೆ ರಂಗರೂಪಕ್ಕಿಳಿಸಿದ್ದಾರೆ. ನಾಟಕದಲ್ಲಿ ಕುವೆಂಪು ಅವರು ಬಳಸಿದ ಹಳಗನ್ನಡ ಮತ್ತು ಹೊಸಗನ್ನಡದ ವಿಶಿಷ್ಟ ಶೈಲಿಯನ್ನೇ ಉಳಿಸಿಕೊಳ್ಳಲಾಗಿದೆ. ನಾಟಕದಲ್ಲಿ 50ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ.

ಮಹಾಕಾವ್ಯವನ್ನು ಜಗದೀಶ ಮನೆವಾರ್ತೆ ಮತ್ತು ಕೃಷ್ಣಕುಮಾರ ನಾರ್ಣಕರ್ಜೆ ಅವರು ರಂಗರೂಪಕ್ಕೆ ಇಳಿಸಿದ್ದಾರೆ. ಹೆಗ್ಗೋಡಿನ ಕೆ.ಜಿ.ಮಹಬಲೇಶ್ವರ ಅವರು ನಿರ್ದೇಶಿಸಿದ್ದಾರೆ. ಎಚ್‌.ಕೆ.ದ್ವಾರಕನಾಥ್‌ ಅವರು ರಂಗ ವಿನ್ಯಾಸಗೊಳಿಸಿದ್ದು, ಪ್ರಮೋದ್‌ ಶಿಗ್ಗಾಂವ್‌ ವಸ್ತ್ರ ಮತ್ತು ಪರಿಕರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀನಿವಾಸ್‌ ಭಟ್‌ ಸಂಗೀತ ನಿರ್ದೇಶನ, ಮಹೇಶ್‌ ಕಲ್ಲತ್ತಿ ಅವರ ಬೆಳಕಿನ ವಿನ್ಯಾಸವಿದೆ.

LEAVE A REPLY

Please enter your comment!
Please enter your name here