ಪಾಂಡವಪುರ: ಭತ್ತದ ಕೊಯ್ಲು ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಡಿ.7ರಂದು ತಾಲೂಕಿನ ಅರಳಕುಪ್ಪೆ-ಸೀತಾಪುರ ಹಳೇ ಗದ್ದೆ ಬಯಲು ಪ್ರದೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಗುರುವಾರ ಭತ್ತದ ಗದ್ದೆಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. 

ಮಧ್ಯಾಹ್ನ 3.30ಕ್ಕೆ ಅರಳಕುಪ್ಪೆ-ಸೀತಾಪುರ ಹಳೇ ಗದ್ದೆ ಬಯಲಿಗೆ ಭೇಟಿ ನೀಡಿದ ಸಚಿವ ಸಿ.ಎಸ್‌.ಪುಟ್ಟರಾಜು, ಪೊಲೀಸ್‌ ಹಾಗೂ ನೀರಾವರಿ ಅಧಿಕಾರಿಗಳೊಂದಿಗೆ ಭದ್ರತೆ ಕುರಿತು ಸಮಾಲೋಚನೆ ನಡೆಸಿದರು. ”ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿ ಭತ್ತದ ಕೊಯ್ಲಿಗೆ ಚಾಲನೆ ನೀಡುತ್ತಿದ್ದಂತೆಯೇ ಉಳಿದ ಆಳುಗಳು ಭತ್ತವನ್ನು ಅರ್ಧ ಗಂಟೆ ವೇಳೆಯಲ್ಲಿ ಕಟಾವು ಮಾಡಬೇಕು. ಇದಕ್ಕಾಗಿ ಕಾರ್ಮಿಕರನ್ನು ಸಿದ್ಧಗೊಳಿಸಿ. ಭತ್ತದ ಗದ್ದೆಯ ಪಕ್ಕದಲ್ಲಿಯೇ ನಿರ್ಮಿಸಿರುವ ಕಣದಲ್ಲಿ ಸಿಎಂ ಕುಮಾರಸ್ವಾಮಿ ಭತ್ತದ ರಾಶಿಗೆ ಪೂಜೆ ಸಲ್ಲಿಸಲಿದ್ದಾರೆ. ಹೀಗಾಗಿ ಅಧಿಕಾರಿಗಳು ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು” ಎಂದು ತಾಕೀತು ಮಾಡಿದರು. 

ಮೇಲ್ಸೇತುವೆಗೆ ಭೂಮಿ ಪೂಜೆ: ”ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿರುವ ಅರಳಕುಪ್ಪೆ-ಸೀತಾಪುರ ಹಳೇ ಗದ್ದೆ ಬಯಲು ಪ್ರದೇಶದಿಂದ-ಮೈಸೂರಿಗೆ ಸಂಪರ್ಕ ಕಲ್ಪಿಸುವ ಕಾವೇರಿಗೆ ನದಿಗೆ 78 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಕಾಮಗಾರಿಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಮೇಲ್ಸೇತುವೆ ಕಾಮಗಾರಿಯಿಂದ ಈ ಭಾಗದ ಜನರು ಮೈಸೂರು ಸಂಪರ್ಕಿಸಲು ಅನುಕೂಲವಾಗಲಿದೆ,”ಎಂದರು. ”ಬಳಿಕ ವದೆ ಸಮುದ್ರ ಗ್ರಾಮಕ್ಕೆ ತೆರಳಲಿರುವ ಸಿಎಂ ಕುಮಾರಸ್ವಾಮಿ, ಕನಗನಮರಡಿ ಸಮೀಪದಲ್ಲಿ ಖಾಸಗಿ ಬಸ್‌ ದುರಂತದಲ್ಲಿ ಮೃತಪಟ್ಟ 30 ಮಂದಿಗೂ ಪರಿಹಾರ ವಿತರಣೆ ಮಾಡಲಿದ್ದಾರೆ,”ಎಂದು ಹೇಳಿದರು. 

ಜಿಪಂ ಸದಸ್ಯ ಸಿ.ಅಶೋಕ್‌, ಗ್ರಾಪಂ ಅಧ್ಯಕ್ಷ ಮಹದೇವು, ಸದಸ್ಯ ವಿಶ್ವನಾಥ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಹೊನಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿಂಢಬೋಗನಹಳ್ಳಿ ನಾಗಣ್ಣ ಸೇರಿದಂತೆ ಹಲವರು ಹಾಜರಿದ್ದರು. 

LEAVE A REPLY

Please enter your comment!
Please enter your name here