ಕೋಟ: ಉಡುಪಿ ಜಿಲ್ಲೆಯ ಸಾಸ್ತಾನದ ಶುಲ್ಕ ವಸೂಲಿ ಕೇಂದ್ರದ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಡಿ.7ರಂದು ನಡೆಯುವ ಬಂದ್‌ ಕರೆಗೆ ವ್ಯಾಪಕ ಜನಾಂದೋಲನ ವ್ಯಕ್ತವಾಗಿದ್ದು, 100ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದೆ. 

ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿ, ಸ್ಥಳೀಯರಿಂದ ಸುಂಕ ವಸೂಲಿ ವಿರುದ್ಧ ಕಳೆದ 2 ವರ್ಷದಿಂದ ನಡೆಸಿದ ಪ್ರತಿಭಟನೆ ಇದೀಗ ಜನಾಂದೋಲನದ ರೂಪ ಪಡೆದಿದೆ. ಮೊದಲು ಪ್ರಶ್ನೆ ಮಾಡಿ, ನಂತರ ಹಕ್ಕಿಗಾಗಿ ಹೋರಾಟದ ಜಾಡು ಹಿಡಿದು ಜನಾಂದೋಲನದೊಂದಿಗೆ ಸುಂಕ ವಿರುದ್ಧ ಹೋರಾಟಕ್ಕೆ ಹೊಸ ಹುರುಪು ಬಂದಿದೆ. 

ಶುಕ್ರವಾರ ನೂರಾರು ಸಂಘಟನೆಯ ಬೆಂಬಲದೊಂದಿಗೆ ಸಮಿತಿಯ ಪದಾಧಿಕಾರಿಗಳು ಕೋಟ ಮಣೂರಿನಿಂದ ಮಾಬುಕಳದವರೆಗೆ ಅಂಗಡಿ ಮುಂಗಟ್ಟು ಬಂದ್‌ ಮಾಡಿ ಬೀದಿಗಿಳಿಯುವಂತೆ ಕೊಟ್ಟ ಕರೆಗೆ ಜನರು ಬೆಂಬಲ ನೀಡಿದರು. ಹೆಜಮಾಡಿ ಟೋಲ್‌ ಹೋರಾಟ ಸಮಿತಿ ಸದಸ್ಯರೂ ಸಾಸ್ತಾನದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಸಹಿತ ಉಡುಪಿ ಜಿಲ್ಲೆಯ ಶಾಸಕರೂ, ವಿಧಾನ ಪರಿಷತ್‌ ಸದಸ್ಯರು ಈ ಪ್ರತಿಭಟನೆಯಲ್ಲಿ ಕೈ ಜೋಡಿಸಿದ್ದಾರೆ. ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ, ಕೇಮಾರು ಸಾಂದಿಪನಿ ಕ್ಷೇತ್ರದ ಈಶ ವಿಠಲ ಸ್ವಾಮೀಜಿ, ಸಾಸ್ತಾನ ಚರ್ಚ್‌ನ ಧರ್ಮಗುರು ಫಾ.ಜಾನ್‌ ವಾಲ್ಟರ್‌ ಮೆಂಡೋನ್ಸಾ, ಬ್ರಹ್ಮಾವರ ಎಸ್‌ಎಂಎಸ್‌ ಚರ್ಚ್‌ನ ಧರ್ಮಗುರು ಫಾ.ಡೇವಿಡ್‌ ಕ್ರಾಸ್ತಾ, ಸಾಸ್ತಾನ ಮಸೀದಿ ಧರ್ಮಗುರು ಈ ಜನಪರ ಹೋರಾಟದಲ್ಲಿ ಕೈ ಜೋಡಿಸಿರುವುದು ಪ್ರತಿಭಟನೆಗೆ ಶಕ್ತಿ ಬಂದಿದೆ. 

* ಅಸಮರ್ಪಕ ಕಾಮಗಾರಿ ಹಾಗೂ ಸ್ಥಳೀಯರಿಂದ ಟೋಲ್‌ ಸಂಗ್ರಹ ವಿರುದ್ಧ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಸಮಿತಿ ಹೋರಾಡುತ್ತಲೇ ಬಂದಿದೆ. ಶುಕ್ರವಾರ ನಡೆಯುವ ಹೋರಾಟಕ್ಕೆ ವ್ಯಾಪಕ ಜನ ಬೆಂಬಲ ದೊರೆಯುವುದರ ಜತೆಗೆ 100ಕ್ಕೂ ಹೆಚ್ಚು ಸಂಘಟನೆಗಳು ಸ್ವಯಂ ಪ್ರೇರಿತರಾಗಿ ನಮ್ಮ ಹೋರಾಟಕ್ಕೆ ಕೈ ಜೋಡಿಸಿರುವುದು ನಮಗೆ ಮತ್ತಷ್ಟು ಬಲ ಬಂದಂತಾಗಿದೆ. ಇಂದಿನ ಪ್ರತಿಭಟನೆ ಅಂತಿಮ ರೂಪ ಪಡೆಯಲಿದೆ. 

LEAVE A REPLY

Please enter your comment!
Please enter your name here