ಬೆಂಗಳೂರು: ಇಡೀ ರಾಜ್ಯವನ್ನು ಮುದುಡಿಸಿರುವ ಚಳಿಯ ಆರ್ಭಟ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಾರಂಭಿಸಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ.

ಈ ಬಾರಿ ರಾಜ್ಯಾದ್ಯಂತ ಚಳಿ ಹೆಚ್ಚಾಗಿರುವ ಕಾರಣ ಶೀತ, ಕೆಮ್ಮು, ಜ್ವರ ಮತ್ತು ಎಚ್1ಎನ್1 ಪ್ರಕರಣಗಳು ಜಾಸ್ತಿಯಾಗುತ್ತಿವೆ. ಪ್ರತಿನಿತ್ಯ ಸಾವಿರಾರು ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 2 ವಾರದ ಅವಧಿಯಲ್ಲಿ 80ಕ್ಕೂ ಹೆಚ್ಚು ಶೀತ ಮತ್ತು ಜ್ವರ ಪ್ರಕರಣಗಳು ದಾಖಲಾಗಿವೆ. ರೋಗ ಬಾಧಿತರ ಪೈಕಿ 5ರಿಂದ 12 ವಯಸ್ಸಿನ ಮಕ್ಕಳೇ ಶೇ.50ಕ್ಕಿಂತ ಹೆಚ್ಚಿರುವುದು ಆತಂಕ ಹೆಚ್ಚಿಸಿದೆ.

ರಾಮನಗರದಲ್ಲಿ ಎಚ್1ಎನ್1ಗೆ 2018-19ರ ಅವಧಿಯಲ್ಲಿ 4 ಮಂದಿ ಬಲಿಯಾಗಿದ್ದು, ಮಲೇರಿಯಾ ಮತ್ತು ಡೆಂಘೆ ಪ್ರಕರಣಗಳು ಹೆಚ್ಚಿವೆ. ವಿಜಯಪುರದಲ್ಲಿ 220 ಮಂದಿ ರಕ್ತ ಮಾದರಿ ಪರೀಕ್ಷೆಗೊಳಪಡಿಸಿದಾಗ 34 ಜನರಿಗೆ ಎಚ್1ಎನ್1 ಇರುವುದು ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ-1,000, ಕೋಲಾರ-1200, ಮಂಡ್ಯ-8,930, ಹಾಸನ-2,000, ತುಮಕೂರು-600, ಚಾಮರಾಜನಗರ-1,000 ಮಂದಿ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ತಪಾಸಣೆಗೊಳಪಟ್ಟಿದ್ದು ಸುಮಾರು 3,500 ಮಂದಿ ಚಳಿ ಮತ್ತಿತರ ಸೋಂಕಿನಿಂದ ಬಳಲುತ್ತಿದ್ದಾರೆ. ಮೈಸೂರು, ಕೊಡುಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕಾರವಾರ, ಗದಗ, ಹುಬ್ಬಳ್ಳಿ ಮತ್ತು ಬಾಗಲಕೋಟೆಯಲ್ಲಿ ಮೈ ಕೊರೆಯುವ ಚಳಿ ಇದ್ದರೂ ಈ ರೋಗಗಳು ಅಷ್ಟಾಗಿ ಬಾಧಿಸಿಲ್ಲ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ 15 ದಿನದಲ್ಲೇ 6 ಜನ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಕಡ್ಡಾಯವಾಗಿ ಪಾಲಿಸಿ

 • ಕಾಯಿಸಿದ ನೀರು ಕುಡಿಯಿರಿ
 • ವಿಟಮಿನ್ ‘ಸಿ’ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ
 • ಬೆಚ್ಚಗಿನ ಉಡುಪು ಧರಿಸಿ
 • ಬಿಸಿ ಆಹಾರ ಸೇವಿಸಿ
 • ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ
 • ಸೋಂಕು ಇರುವ ರೋಗಿಗಳಿಂದ ದೂರವಿರಿ

ವೈದ್ಯರ ಸಲಹೆಗಳಿವು..

 • ಚಳಿಗಾಲದಲ್ಲಿ ಜ್ವರ, ನೆಗಡಿ, ಶೀತ, ಎಚ್1ಎನ್1 ಸೋಂಕು ಬೇಗ ಹರಡುವುದರಿಂದ ಚಿಕಿತ್ಸೆ ಪಡೆದುಕೊಳ್ಳಲು ತಡ ಮಾಡಬಾರದು.
 • ಮಧುಮೇಹ, ಕಿಡ್ನಿ ಸಮಸ್ಯೆ ಇರುವವರು ಹೊರಗೆ ಹೆಚ್ಚು ಓಡಾಡಬಾರದು.
 • ಮಕ್ಕಳಿಗೆ ಆಹಾರದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ವಾಂತಿಯಾಗುತ್ತದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು.
 • ಚಳಿಗಾಲದಲ್ಲಿ ಚಿಕ್ಕಮಕ್ಕಳಲ್ಲಿ ಎಚ್1ಎನ್1 ಜ್ವರ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪಾಲಕರು ಜಾಗ್ರತೆ ವಹಿಸಬೇಕು. ಜ್ವರ, ಕೆಮ್ಮು ಮತ್ತು ಶೀತ ಬಂದರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.
 • ಉಸಿರಾಟದ ತೊಂದರೆ ಹೆಚ್ಚಾದಾಗ ನ್ಯುಮೋನಿಯಾ ಬರುತ್ತದೆ. ನೆಗಡಿ, ಕೆಮ್ಮು, ಜ್ವರ ಬಂದರೆ ವಾರಗಳ ಕಾಲ ಇರುತ್ತದೆ. ಔಷಧಿಯಿಂದಲೂ ಬೇಗನೆ ಗುಣವಾಗುವುದಿಲ್ಲ. ಕೆಲ ಮಕ್ಕಳಲ್ಲಿ ವಾಂತಿ ಅಥವಾ ಭೇದಿ ಕಾಣಿಸಿಕೊಳ್ಳಬಹುದು. ತಲೆ ನೋವು, ಸ್ನಾಯು ಸೆಳೆತ ಕಾಣಿಸಬಹುದು. ಇಂತಹ ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ.

ಉತ್ತರಕ್ಕೆ ಶೀತಗಾಳಿ ಪ್ರಭಾವ, ದಕ್ಷಿಣದಲ್ಲೂ ಚಳಿ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೀತಗಾಳಿ (ಕೋಲ್ಡ್​ವೇವ್) ಪ್ರಭಾವದಿಂದಾಗಿ ಕನಿಷ್ಠ ತಾಪಮಾನ ತೀವ್ರ ಕುಸಿದಿದೆ. ನೆರೆ ರಾಜ್ಯಗಳಲ್ಲಿನ ಶೀತಗಾಳಿ ಪ್ರಭಾವ ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ. ಡಿ.31ರಂದು ಬೀದರ್​ನಲ್ಲಿ ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್ ಇತ್ತು. ಜ.1ರಂದು ಮತ್ತಷ್ಟು ಕುಸಿದು 6 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. 1967ರ ಜ.9ರಂದು 6.2 ಡಿಗ್ರಿ ಸೆ. ಕನಿಷ್ಠ ತಾಪಮಾನ ಇಲ್ಲಿ ದಾಖಲಾಗಿತ್ತು. ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಚಳಿ ಕೊಂಚ ಕಡಿಮೆ ಆಗಿತ್ತು.

ಬುಧವಾರ (ಜ.9) ಮತ್ತೆ 6.8 ಡಿಗ್ರಿ ಸೆ.ಗೆ ಕುಸಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಳಿ ಮುಂದುವರಿಕೆ: ರಾಜ್ಯದ ಶೇ.80 ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ತಾಪಮಾನ 10-16 ಡಿಗ್ರಿ ಸೆಲ್ಸಿಯಸ್ ಇದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಧಾರವಾಡ, ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರಿಯಲಿದೆ. ಈ ಅವಧಿಯಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದ್ದು, ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ತೀವ್ರ ಕುಸಿದಿದೆ. ಹಾಸನ ಮತ್ತು ಮಡಿಕೇರಿಯಲ್ಲಿ 8.8, ಆಗುಂಬೆಯಲ್ಲಿ 9.4, ಶಿವಮೊಗ್ಗದಲ್ಲಿ 11.6, ದಾವಣಗೆರೆಯಲ್ಲಿ 9.8, ಮೈಸೂರಿನಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾರದ ಹಿಂದೆ ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗಿತ್ತು. ನಂತರದ ದಿನಗಳಲ್ಲಿ ಏರಿಕೆ ಕಂಡು ಮಂಗಳವಾರ (ಜ.8) 15.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಬುಧವಾರ ಬೆಳಗಿನ ಜಾವ ಮತ್ತೆ ಕುಸಿದಿದ್ದು 13.2 ಡಿಗ್ರಿ ಸೆ. ದಾಖಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಕನಿಷ್ಠ ತಾಪಮಾನ 11.4 ಡಿಗ್ರಿ ಸೆ.ಗೆ ಬಂದಿದೆ.

Summary
ಇಡೀ ರಾಜ್ಯವನ್ನು ಮುದುಡಿಸಿರುವ ಚಳಿಯ ಆರ್ಭಟ!!
Article Name
ಇಡೀ ರಾಜ್ಯವನ್ನು ಮುದುಡಿಸಿರುವ ಚಳಿಯ ಆರ್ಭಟ!!
Description
ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ತೀವ್ರ ಕುಸಿದಿದೆ. ಹಾಸನ ಮತ್ತು ಮಡಿಕೇರಿಯಲ್ಲಿ 8.8, ಆಗುಂಬೆಯಲ್ಲಿ 9.4, ಶಿವಮೊಗ್ಗದಲ್ಲಿ 11.6, ದಾವಣಗೆರೆಯಲ್ಲಿ 9.8, ಮೈಸೂರಿನಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾರದ ಹಿಂದೆ ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗಿತ್ತು. ನಂತರದ ದಿನಗಳಲ್ಲಿ ಏರಿಕೆ ಕಂಡು ಮಂಗಳವಾರ (ಜ.8) 15.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಬುಧವಾರ ಬೆಳಗಿನ ಜಾವ ಮತ್ತೆ ಕುಸಿದಿದ್ದು 13.2 ಡಿಗ್ರಿ ಸೆ. ದಾಖಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಕನಿಷ್ಠ ತಾಪಮಾನ 11.4 ಡಿಗ್ರಿ ಸೆ.ಗೆ ಬಂದಿದೆ.

LEAVE A REPLY

Please enter your comment!
Please enter your name here