ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ದೋಸ್ತಿ ಪಕ್ಷಗಳಿಗೆ ಬೇಡವಾದ ಕೂಸಾಗಿದೆ. ಬಿಜೆಪಿಯ ಪ್ರಬಲ ಅಭ್ಯರ್ಥಿ ಎದುರು ಸ್ಪರ್ಧಿಸಲು ನಾಯಕರು ಹಿಂದೇಟು ಹಾಕುತ್ತಿರುವ ಕಾರಣ ಸೀಟು ಫುಟ್​ಬಾಲ್​ನಂತೆ ಕಾಂಗ್ರೆಸ್​ನಿಂದ ಜೆಡಿಎಸ್ ಕಡೆ ಓಡಾಡುತ್ತಿದೆ.

‘ಜಿಲ್ಲೆಯಲ್ಲಿ ಜೆಡಿಎಸ್​ಗೆ ನೆಲೆ ಇಲ್ಲ. ಎಂಪಿ ಸೀಟನ್ನು ಕಾಂಗ್ರೆಸ್​ಗೇ ಕೊಡಬೇಕು’ ಎಂದು ಕೈ ಪಡೆ ನಾಯಕರು ತೋರಿಕೆಗೆ ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ಯಾರೂ ತಾವೇ ಸ್ಪರ್ಧಿಸುತ್ತೇವೆ ಎಂದು ಗಟ್ಟಿಯಾಗಿ ಹೇಳುವ ಧೈರ್ಯ ತೋರಿಲ್ಲ ಎನ್ನಲಾಗಿದೆ. ಇದು ಹೈಕಮಾಂಡ್​ಗೆ ತಲೆಬಿಸಿಯಾಗಿದೆ. ಇದರಿಂದ ರಾಜ್ಯದಲ್ಲಿ ಜೆಡಿಎಸ್​ಗೆ ನೀಡಬೇಕಿರುವ 8 ಕ್ಷೇತ್ರಗಳ ಪಟ್ಟಿಯಲ್ಲಿ ಈ ಕ್ಷೇತ್ರವನ್ನೂ ಸೇರಿಸಿ ಸಾಗ ಹಾಕಲು ಪಕ್ಷ ಚಿಂತಿಸುತ್ತಿದೆ. ಆದರೆ, ಜೆಡಿಎಸ್ ಅದಕ್ಕೆ ಒಪ್ಪಲು ಸಿದ್ಧವಿಲ್ಲ.

ಜಾ.ದಳ ಮುಖಂಡ ಆನಂದ ಅಸ್ನೋಟಿಕರ್ ಟಿಕೆಟ್​ಗಾಗಿ ದುಂಬಾಲು ಬಿದ್ದಿದ್ದರೂ ವರಿಷ್ಠರು ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಉತ್ತರ ಕನ್ನಡದ ಬದಲು ಖಚಿತವಾಗಿ ಗೆಲ್ಲುವ ಕ್ಷೇತ್ರಗಳನ್ನು ಪಡೆದುಕೊಳ್ಳುವ ಚೌಕಾಶಿಯಲ್ಲಿದ್ದಾರೆ.

ವರಿಷ್ಠರ ಮಾತುಕತೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡರಾದ ಪ್ರಶಾಂತ್ ದೇಶಪಾಂಡೆ ಹಾಗೂ ನೀವೇದಿತ ಆಳ್ವಾ ಅವರನ್ನು ಕರೆಸಿ ಒಮ್ಮೆ ಮಾತುಕತೆ ನಡೆಸಿದ್ದಾರೆ. ಯಾರೂ ತಮಗೇ ಟಿಕೆಟ್ ನೀಡಿ ಎಂದು ಗಟ್ಟಿಯಾಗಿ ಹೇಳಿಲ್ಲ ಎನ್ನಲಾಗಿದೆ. ಇನ್ನು ಆನಂದ ಅಸ್ನೋಟಿಕರ್ ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲೇ ಇದ್ದು ಟಿಕೆಟ್​ಗಾಗಿ ನಿರಂತರ ಯತ್ನ ನಡೆಸಿದ್ದಾರೆ. ಮೈತ್ರಿ ಪಕ್ಷಗಳ ರಾಜ್ಯವ್ಯಾಪಿ ಸೀಟು ಹಂಚಿಕೆ ಖಚಿತವಾದ ನಂತರವಷ್ಟೇ ಇಲ್ಲಿನ ಸೀಟು ಯಾರಿಗೆ ಎಂಬುದು ಗೊತ್ತಾಗಲಿದೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಇಕ್ಕಟ್ಟು

ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ, ಹಲವು ತಾಪಂಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಎಲ್ಲ ಕ್ಷೇತ್ರಗಳಲ್ಲೂ ಎರಡನೇ ಹಂತದ ಹಲವು ನಾಯಕರಿದ್ದಾರೆ. ಸಾಕಷ್ಟು ಕಾರ್ಯಕರ್ತರಿದ್ದಾರೆ. ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಗೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕು ಎಂಬ ಉತ್ಸಾಹವೂ ಇವರಲ್ಲಿದೆ. ಆದರೆ, ಹೈಕಮಾಂಡ್ ನಿರ್ಧಾರದಿಂದ ಏನೂ ಮಾಡದೇ ಕೈ ಹಿಸುಕಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಮೈತ್ರಿ ಪಕ್ಷಕ್ಕೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಕಾರ್ಯಕರ್ತರೇ ಜೆಡಿಎಸ್ ಸಂಘಟನೆಗೂ ದುಡಿಯಬೇಕಾಗಿರುವುದು ಇವರಿಗೆ ನುಂಗಲಾರದ ತುತ್ತಾಗಿದೆ.

LEAVE A REPLY

Please enter your comment!
Please enter your name here