ಉಪ್ಪಿನಂಗಡಿ : ಇಲ್ಲಿನ ಹಳೇ ಬಸ್ ನಿಲ್ದಾಣ ಬಳಿಯ ಹೋಟೆಲ್ ಎದುರು ಭಾನುವಾರ ಸಾಯಂಕಾಲ ನಿಲ್ಲಿಸಿದ್ದ ಜೀಪನ್ನು ಹೋಟೆಲ್ ಸಿಬ್ಬಂದಿ ಚಲಾಯಿಸಿದ್ದು, ಜೀಪಿನಡಿಗೆ ಬಿದ್ದ ಮಹಿಳೆ ಹಾಗೂ ಮಗು ಪವಾಡಸದೃಶವಾಗಿ ಪಾರಾಗಿದ್ದಾರೆ. ಜೀಪ್ ಡಿಕ್ಕಿಯಾಗಿ ಬೈಕ್, ಸ್ಕೂಟಿ ನಜ್ಜುಗುಜ್ಜಾಗಿದ್ದು, ಗೇಟ್ ಪಿಲ್ಲರ್ ಮುರಿದು ಬಿದ್ದಿದೆ.

ಉರುವಾಲು ಗ್ರಾಮದ ಚಂದ್ರಲತಾ ಹಾಗೂ ಅವರ ಎರಡೂವರೆ ವರ್ಷದ ಪುತ್ರ ರಿತೇಝ್ ಅಪಾಯದಿಂದ ಪಾರಾದವರು. ಚಂದ್ರಲತಾ ತಲೆಗೆ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಹಿರೇಬಂಡಾಡಿಯ ಜಗದೀಶ್ ಎಂಬುವರು ಜೀಪ್‌ನಲ್ಲಿ ಹೋಟೆಲ್‌ಗೆ ಕಟ್ಟಿಗೆ ತಂದಿದ್ದು, ಅದನ್ನು ಖಾಲಿ ಮಾಡಿಸಲು ಜೀಪನ್ನು ಅಡುಗೆ ಕೋಣೆ ಎದುರಿನ ಮುಕ್ತಿಧಾಮಕ್ಕೆ ಹೋಗುವ ದಾರಿಯಲ್ಲಿ ನಿಲ್ಲಿಸಿ ಚಹಾ ಕುಡಿಯಲು ತೆರಳಿದ್ದರು. ತೆರಳುವಾಗ ಜೀಪ್‌ನಲ್ಲೇ ಕೀ ಬಿಟ್ಟು ಹೋಗಿದ್ದರು. ಕಟ್ಟಿಗೆ ಖಾಲಿ ಮಾಡಿದ ಬಳಿಕ ಹೋಟೆಲ್ ಸಿಬ್ಬಂದಿ ಶಂಕರ ಎಂಬಾತ ನಿಲ್ಲಿಸಿದ ಜೀಪಿಗೆ ಹತ್ತಿ ಜೀಪ್ ಸ್ಟಾರ್ಟ್ ಮಾಡಿದಾಗ ಒಮ್ಮಿಂದೊಮ್ಮೆಲೇ ಮುನ್ನುಗ್ಗಿದ ಜೀಪ್, ಹೋಟೆಲ್ ಎದುರು ನಿಲ್ಲಿಸಿದ್ದ ಬೈಕ್‌ಗೆ ಬಡಿದು, ಮುಂದಿದ್ದ ಮೆಡಿಕಲ್ ಬಳಿ ಮಗುವನ್ನು ಎತ್ತಿಕೊಂಡು ನಿಂತಿದ್ದ ಚಂದ್ರಲತಾ ಅವರಿಗೆ ಡಿಕ್ಕಿಯಾಯಿತು. ಡಿಕ್ಕಿ ರಭಸಕ್ಕೆ ಮಗು ದೂರಕ್ಕೆ ಎಸೆಯಲ್ಪಟ್ಟಿದ್ದು, ಚಂದ್ರಲತಾ ಮೇಲೆ ಜೀಪು ಹಾದುಹೋಗಿದೆ. ಮುಂದುವರಿದ ಜೀಪ್ ನಿಲ್ಲಿಸಿದ್ದ ಸ್ಕೂಟಿಗೂ ಗುದ್ದಿ ಅದನ್ನು ಎಳೆದುಕೊಂಡು ಹೋಗಿ ಕಾಂಪೌಂಡ್ ಗೇಟ್‌ನ ಪಿಲ್ಲರ್‌ಗೆ ಡಿಕ್ಕಿಯಾಗಿದೆ. ಜೀಪ್‌ನ ಹಿಂಬದಿ ಚಕ್ರ ಅಂಗಡಿ ಮಳಿಗೆಗಳ ಜಗುಲಿ ಮೇಲೆ ಹತ್ತಿ ನಿಂತಿದೆ. ಈ ಎಲ್ಲ ಘಟನೆ ಕ್ಷಣಾರ್ಧದಲ್ಲಿ ನಡೆಯಿತು. ಹೊಟೇಲ್ ಸಿಬ್ಬಂದಿ ಅಧಿಕ ಪ್ರಸಂಗಿತನ ಘಟನೆಗೆ ಕಾರಣವಾಗಿದೆ.

ಶನಿವಾರವೂ ನಡೆದಿತ್ತು ಅಪಘಾತ ಇದೇ ಹೋಟೆಲ್‌ಗೆ ಶನಿವಾರ ಸಾಮಾನು ಹೇರಿಕೊಂಡು ಬಂದ ಜೀಪ್ ಚಾಲಕ ಕೀಯನ್ನು ಜೀಪ್‌ನಲ್ಲಿ ಬಿಟ್ಟಿದ್ದು, ಹೋಟೆಲ್ ಸಿಬ್ಬಂದಿಯೋರ್ವ ಚಲಾಯಿಸಿದ್ದಾನೆ. ಆ ಸಂದರ್ಭ ಜೀಪ್ ರಸ್ತೆ ಬದಿಗೆ ಗುದ್ದಿ ಬಂಪರ್‌ಗೆ ಹಾನಿಯಾಗಿತ್ತು. ಇಷ್ಟಾದರೂ ಭಾನುವಾರವೂ ಚಾಲಕ ಕೀಯನ್ನು ಜೀಪಿನಲ್ಲೇ ಇಟ್ಟು ಹೋಗುವ ಮೂಲಕ ಮತ್ತೆ ಬೇಜವಾಬ್ದಾರಿ ತೋರಿದ್ದರಿಂದ ಮತ್ತೊಮ್ಮೆ ಅನಾಹುತ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮುಖ್ಯರಸ್ತೆಗೆ ಮುನ್ನುಗ್ಗಲ್ಲಿತ್ತು ಜೀಪು!: ಪಿಲ್ಲರ್ ಕಂಬ ಹಾಗೂ ಸ್ಕೂಟಿ ಇರದಿದ್ದರೆ ಜೀಪ್ ನೇರವಾಗಿ ಮುಖ್ಯರಸ್ತೆಗೆ ಬಂದು ರಸ್ತೆಯ ಇನ್ನೊಂದು ಬದಿಯಲ್ಲಿರುವ ತರಕಾರಿ ಅಂಗಡಿ ಅಥವಾ ಇತರೆ ಅಂಗಡಿಗಳಿಗೆ ನುಗ್ಗುತ್ತಿತ್ತು. ಆದರೆ ಸ್ಕೂಟಿ ಹಾಗೂ ಪಿಲ್ಲರ್ ಕಂಬದಿಂದ ಹೆಚ್ಚಿನ ಅಪಾಯ ತಪ್ಪಿದೆ. ಅಲ್ಲದೆ, ಹೋಟೆಲ್ ಪಕ್ಕ ಹಾಗೂ ಮುಖ್ಯರಸ್ತೆಯಲ್ಲಿ ಬೇರೆ ದಿನಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಇರುತ್ತಿದ್ದು, ಭಾನುವಾರವಾದ್ದರಿಂದ ಜನಸಂದಣಿ ಕಡಿಮೆಯಿದ್ದು ಭಾರೀ ಅನಾಹುತ ತಪ್ಪಿದೆ.

Summary
ಉಪ್ಪಿನಂಗಡಿ : ಜೀಪ್‌ನಡಿ ಬಿದ್ದ ತಾಯಿ, ಮಗು ಪಾರು !
Article Name
ಉಪ್ಪಿನಂಗಡಿ : ಜೀಪ್‌ನಡಿ ಬಿದ್ದ ತಾಯಿ, ಮಗು ಪಾರು !
Description
ಆದರೆ ಸ್ಕೂಟಿ ಹಾಗೂ ಪಿಲ್ಲರ್ ಕಂಬದಿಂದ ಹೆಚ್ಚಿನ ಅಪಾಯ ತಪ್ಪಿದೆ. ಅಲ್ಲದೆ, ಹೋಟೆಲ್ ಪಕ್ಕ ಹಾಗೂ ಮುಖ್ಯರಸ್ತೆಯಲ್ಲಿ ಬೇರೆ ದಿನಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಇರುತ್ತಿದ್ದು, ಭಾನುವಾರವಾದ್ದರಿಂದ ಜನಸಂದಣಿ ಕಡಿಮೆಯಿದ್ದು ಭಾರೀ ಅನಾಹುತ ತಪ್ಪಿದೆ.

LEAVE A REPLY

Please enter your comment!
Please enter your name here