ಉಪ್ಪುಂದ: ದೇಶದಲ್ಲಿಯೇ ಮೊದಲ ಬಾರಿಗೆ ಮಂಗಳೂರು ವಿಭಾಗ ತೆರಿಗೆ ಇಲಾಖೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಬ್ಯಾಂಕಿಂಗ್ ವ್ಯವಹಾರ ಹಾಗೂ ಲಾಭದ ಮೇಲೆ ತೆರಿಗೆ ವಿಧಿಸಿರುವ ಕ್ರಮ ಕಾನೂನಿಗೆ ವಿರುದ್ಧವಾಗಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಉಪ್ಪುಂದ ಸಂಘ ರೈತಸಿರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಬೈಂದೂರು ಮತ್ತು ಕುಂದಾಪುರ ತಾಲೂಕಿನ ವಿವಿಧ ಕೃಷಿಪತ್ತಿನ ಸಂಘ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

2006ರ ಹಣಕಾಸು ಕಾಯ್ದೆ 80ಪಿ ತಿದ್ದುಪಡಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು (ಪಿಎಲ್‌ಡಿ ಬ್ಯಾಂಕ್) ತಮ್ಮ ಸದಸ್ಯರೊಂದಿಗೆ ಬ್ಯಾಂಕಿಂಗ್ ವ್ಯವಹಾರ ನಡೆಸುವುದು, ಸಾಲ ಸೌಲಭ್ಯ ನೀಡುವುದು ಅಥವಾ ವ್ಯವಹಾರದಿಂದ ಲಾಭ ಮಾಡಿದರೆ ತೆರಿಗೆ ವಿಧಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ, ತೆರಿಗೆ ಇಲಾಖೆ ಕೃಷಿಪತ್ತಿನ ಸಂಘಗಳಿಗೆ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ ಎಂದರು.
ಕೃಷಿಕರ ನೆರವಿಗಾಗಿ ಇರುವ ಸಂಸ್ಥೆಗಳ ಮೇಲಿನ ಇಲಾಖೆ ಅಧಿಕಾರಿಗಳ ಪ್ರಹಾರ ಮತ್ತು ಒತ್ತಡಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಉಭಯ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳ ಅಧ್ಯಕ್ಷ, ನಿರ್ದೇಶಕರೊಂದಿಗೆ ಸಮಾಲೋಚಿಸಿ ಪ್ರತಿಭಟನೆ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ತೆರಿಗೆ ಸಲಹೆಗಾರ ಅಶೋಕ ಶೆಟ್ಟಿ ಕೋಟೇಶ್ವರ, ತೆರಿಗೆ ಕುರಿತಾದ ವಿವರ ಮಂಡಿಸಿದರು. ಉಭಯ ತಾಲೂಕಿನ 22 ವಿವಿಧ ಕೃಷಿಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

Summary
ಉಪ್ಪುಂದ : ಕೃಷಿಪತ್ತಿನ ಸಹಕಾರಿ ಸಂಘಗಳ ಬ್ಯಾಂಕಿಂಗ್ ವ್ಯವಹಾರಕ್ಕೆ ತೆರಿಗೆಗೆ ಆಕ್ರೋಶ !
Article Name
ಉಪ್ಪುಂದ : ಕೃಷಿಪತ್ತಿನ ಸಹಕಾರಿ ಸಂಘಗಳ ಬ್ಯಾಂಕಿಂಗ್ ವ್ಯವಹಾರಕ್ಕೆ ತೆರಿಗೆಗೆ ಆಕ್ರೋಶ !
Description
ತೆರಿಗೆ ಸಲಹೆಗಾರ ಅಶೋಕ ಶೆಟ್ಟಿ ಕೋಟೇಶ್ವರ, ತೆರಿಗೆ ಕುರಿತಾದ ವಿವರ ಮಂಡಿಸಿದರು. ಉಭಯ ತಾಲೂಕಿನ 22 ವಿವಿಧ ಕೃಷಿಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here