ಮೈಸೂರು, ನವೆಂಬರ್.23: ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‍ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕ್ ನ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನ.12ರಂದು ನಡೆದ ಚುನಾವಣೆಯಲ್ಲಿ ಜಿ.ಡಿ.ಹರೀಶ್‍ ಗೌಡರ ಬಣ ಜಯಭೇರಿ ಭಾರಿಸಿದ್ದು, ಒಟ್ಟು 17ರಲ್ಲಿ 15 ನಿರ್ದೇಶಕರು ಒಟ್ಟಿಗಿದ್ದರು.

ಜಿ.ಡಿ. ಹರೀಶ್ ಗೌಡ ಸೇರಿದಂತೆ ಬ್ಯಾಂಕ್ ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಹಕಾರಿ ಸಿ.ಬಸವೇಗೌಡ, ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ವಿ.ದೇವರಹಟ್ಟಿ, ಜಿಪಂ ಸದಸ್ಯ ಬಿ.ಎನ್.ಸದಾನಂದ, ಜಿಪಂ ಮಾಜಿ ಉಪಾಧ್ಯಕ್ಷ ಹೆಚ್.ಸುಬ್ಬಯ್ಯ, ಎಂ.ಕುಮಾರ್, ಜಿ.ಸಿ.ಸಿಂಗೇಗೌಡ, ಎಂ.ಪಿ. ಸುನೀಲ್, ಸಿ.ಎನ್.ರವಿ, ಬಿ.ಜಿ.ನಾಗೇಂದ್ರ ಕುಮಾರ್, ಕೆ.ಜಿ.ಮಹೇಶ್, ಡಾ.ಎಂ.ಬಿ. ಮಂಜೇಗೌಡ, ಹೆಚ್.ಜೆ.ನಾಗಪ್ರಸಾದ್, ಕೆ.ಎಸ್.ಕುಮಾರ್ ಹಾಗೂ ಎಸ್.ಎಂ. ಕೆಂಪಣ್ಣ ಒಂದು ಬಣವಾದರೆ, ಮತ್ತೊಂದು ಬಣದಲ್ಲಿದ್ದದ್ದು ಶಾಸಕ ಆರ್.ನರೇಂದ್ರ ಹಾಗೂ ವೈ.ಎಂ.ಜಯರಾಮು ಮಾತ್ರ.

ಐವರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಸಚಿವ ಜಿ.ಟಿ.ದೇವೇಗೌಡರ ಮಾರ್ಗದರ್ಶನದಲ್ಲಿ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಹಾಗೂ ಹಿರಿಯ ಸಹಕಾರಿ ಸಿ.ಬಸವೇಗೌಡರು ಚುನಾವಣೆಯ ಉಸ್ತುವಾರಿಗಳಂತೆ ಕೆಲಸ ಮಾಡಿದ್ದರು.

ಪರಿಣಾಮ ಚುನಾವಣೆ ನಡೆದ 12 ಕ್ಷೇತ್ರಗಳಲ್ಲೂ ಜಿ.ಡಿ.ಹರೀಶ್ ಗೌಡ ಬಣದವರೇ ಜಯಭೇರಿ ಭಾರಿಸಿದರು. ಇದರಲ್ಲಿ 2 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಸಮಾನ ಮತ ಬಂದಿದ್ದರಿಂದ ಲಾಟರಿಯಲ್ಲಿ ಆಯ್ಕೆ ಮಾಡಲಾಯಿತು. ಈ ಅದೃಷ್ಟ ಪರೀಕ್ಷೆಯಲ್ಲೂ ಜಿ.ಡಿ.ಹರೀಶ್ ಗೌಡರ ಬೆಂಬಲಿಗರೇ ಗೆದ್ದರು.

ಇದರೊಂದಿಗೆ ಸಹಕಾರಿ ಚುನಾವಣೆಯಲ್ಲಿ ಮುಂದಾಳತ್ವ ವಹಿಸಿ, ಭಾರೀ ಬಹುಮತದೊಂದಿಗೆ ತಂಡವನ್ನು ಭದ್ರಪಡಿಸಿಕೊಳ್ಳುವಲ್ಲಿ ಹರೀಶ್ ಗೌಡ ಯಶಸ್ವಿಯಾಗಿದ್ದಾರೆ. ಕಳೆದ ಆಡಳಿತ ಮಂಡಳಿಯಲ್ಲೂ ನಿರ್ದೇಶಕರಾಗಿ ಕೆಲಸ ಮಾಡಿರುವ ಜಿ.ಟಿ.ಹರೀಶ್ ಗೌಡ 2ನೇ ಬಾರಿಗೂ ಗೆದ್ದು, ಯಶಸ್ವಿ ಸಹಕಾರಿ ಪಯಣ ಮುಂದುವರಿಸಿದ್ದಾರೆ.

ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಬಸವೇಗೌಡರು ಸೇರಿದಂತೆ ತಂಡದಲ್ಲಿರುವ ಎಲ್ಲಾ ನಿರ್ದೇಶಕರೂ ಹರೀಶ್‍ಗೌಡರನ್ನು ಬೆಂಬಲಿಸಿದ್ದಾರೆ.

ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಬಿಜೆಪಿಯ ಸದಾನಂದ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಚುನಾವಣಾಧಿಕಾರಿ ಶಿವೇಗೌಡ ಘೋಷಣೆ ಮಾಡಿದರು. ಇನ್ನು ಇದೇ ವೇಳೆ ಜಿಡಿ ಹರೀಶ್ ರಿಗೆ ಹೂವಿನ ಹಾರ‌ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಂತಸ ಹಂಚಿಕೊಂಡ ಹರೀಶ್ ಅವರು, ತಂದೆಯು ಸಹ ಇದೇ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಅವರ ಅನುಭವವನ್ನು ಪಡೆದು ಉತ್ತಮ ಆಡಳಿತ ನೀಡುತ್ತೇನೆ. ರೈತರ ಪರ ಕೆಲಸ ಮಾಡುತ್ತೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here