ಬೆಂಗಳೂರು (ಜ. 11): ಪ್ರತಿಷ್ಟಿತ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ತನ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಹಿನ್ನೆಲೆ ಗಾಯಕಿ ಎಸ್‌.ಜಾನಕಿ, ಬನ್ನಂಜೆ ಗೋವಿಂದಾಚಾರ್ಯ ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿ ಒಟ್ಟು 12 ಮಂದಿ ಜನರಿಗೆ ಈ ಬಾರಿಯ ಪ್ರಶಸ್ತಿ ಘೋಷಿಸಿದೆ.

ಈ ಪೈಕಿ ಚೊಚ್ಛಲ ನಿರ್ದೇಶನಕ್ಕಾಗಿ ನೀಡುವ ಬಿ. ಸುರೇಶ್‌ ಪ್ರಶಸ್ತಿಗೆ ಚಂಪಾ ಶೆಟ್ಟಿಹಾಗೂ ಕಾರ್ತಿಕ್‌ ಸರಗೂರ್‌ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಕತೆ, ಅತ್ಯುತ್ತಮ ಸಂಗೀತ ಹಾಗೂ ಅತ್ಯುತ್ತಮ ಗೀತೆ ರಚನೆಗಾಗಿ ರಿಷಬ್‌ ಶೆಟ್ಟಿನಿರ್ದೇಶನ ಹಾಗೂ ನಿರ್ಮಾಣದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಹೆಚ್ಚು ಪ್ರಶಸ್ತಿಗೆ ಪಾತ್ರವಾಗಿದೆ.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಗೂ ಬನ್ನಂಜೆ ಗೋವಿಂದಾಚಾರ್ಯ ಅವರು 2018 ಸಾಲಿನ ‘ರಾಘವೇಂದ್ರ ಚಿತ್ರವಾಣಿ’ ಪ್ರಶಸ್ತಿಗೆ ಪಾತ್ರರಾದರೆ, ಖ್ಯಾತ ಹಿನ್ನೆಲೆ ಗಾಯಕಿ ಎಸ್‌. ಜಾನಕಿ ಅವರನ್ನು ‘ಡಾ. ರಾಜ್‌ ಕುಮಾರ್‌ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ನಿರ್ದೇಶಕ ಪಿ. ವಾಸು ಅವರಿಗೆ ‘ಯಜಮಾನ’ ಚಿತ್ರದ ಖ್ಯಾತಿಯ ‘ಆರ್‌.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’, ನಟಿ ಆರೂರು ಸತ್ಯಭಾಮ ಅವರಿಗೆ ‘ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್‌.ಎಂ.ರಾಮಚಂದ್ರ ಪ್ರಶಸ್ತಿ’ ನೀಡಲಾಗುತ್ತಿದೆ.

ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ವಾಸುಕಿ ವೈಭವ್‌ ಅವರಿಗೆ ‘ಎಂ.ಎಸ್‌.ರಾಮಯ್ಯ ಮೀಡಿಯಾ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ ಪ್ರಶಸ್ತಿ’, ಅತ್ಯುತ್ತಮ ಕತೆಗಾಗಿ ನಿರ್ದೇಶಕ ರಿಷಬ್‌ ಶೆಟ್ಟಿಅವರಿಗೆ ‘ನಿರ್ದೇಶಕ ಕೆ. ಜಯರಾಂ ಪ್ರಶಸ್ತಿ’, ಹಾಗೆಯೇ ಅತ್ಯುತ್ತಮ ಸಂಭಾಷಣೆಗಾಗಿ ಬಿ.ಎ. ಮಧು ಅವರಿಗೆ ‘ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

‘ಜೀರ್ಜಿಂಬೆ ’ಚಿತ್ರದ ನಿರ್ದೇಶನಕ್ಕಾಗಿ ಕಾರ್ತಿಕ್‌ ಸರಗೂರ್‌, ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ನಿರ್ದೇಶನಕ್ಕಾಗಿ ಚಂಪಾ ಶೆಟ್ಟಿ ಉತ್ತಮ ನಿರ್ದೇಶಕ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಗೀತೆ ರಚನೆಗಾಗಿ ಕೆ. ಕಲ್ಯಾಣ್‌ ಅವರಿಗೆ ‘ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸ ಮೂರ್ತಿ ಸ್ಮರಣಾರ್ಥ ಪ್ರಶಸ್ತಿ’ ಹಾಗೂ ಹಿರಿಯ ನಟ ದೊಡ್ಡಣ್ಣ ಅವರನ್ನು ಹಿರಿಯ ಪತ್ರಕರ್ತ ಸಿ.ಸೀತಾರಾಂ ಸ್ಮರಣಾರ್ಥ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದೇ ತಿಂಗಳು 25ರಂದು ಶುಕ್ರವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆ ಕಲಾವಿದರ ಸಂಘದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಚಿತ್ರೋದ್ಯಮದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆಂದು ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌ ತಿಳಿಸಿದ್ದಾರೆ.

Summary
ಎಸ್‌. ಜಾನಕಿ,  Rockline Venkatesh ಸೇರಿ 12 ಮಂದಿಗೆ ಚಿತ್ರವಾಣಿ ಪ್ರಶಸ್ತಿ
Article Name
ಎಸ್‌. ಜಾನಕಿ, Rockline Venkatesh ಸೇರಿ 12 ಮಂದಿಗೆ ಚಿತ್ರವಾಣಿ ಪ್ರಶಸ್ತಿ

LEAVE A REPLY

Please enter your comment!
Please enter your name here