ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಹೈಪರ್‌ಸಾನಿಕ್ ಮತ್ತು ಶಾಕ್‌ವೇವ್ ಸಂಶೋಧನಾ ಪ್ರಯೋಗಾಲಯದಲ್ಲಿ ಸೋರಿಕೆಯಾದ ಗ್ಯಾಸ್ ಸ್ಫೋಟಗೊಂಡು ಸಂಶೋಧಕರೊಬ್ಬರು ಮೃತಪಟ್ಟು , ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಲ್ಲೇಶ್ವರದಲ್ಲಿರುವ ಐಐಎಸ್ಸಿಯಲ್ಲಿ ಬುಧವಾರ ಮಧ್ಯಾಹ್ನ 2.20ರ ಸುಮಾರಿಗೆ ಘಟನೆ ನಡೆದಿದೆ. ಹೈದ್ರಾಬಾದ್ ಮೂಲದ ಸಂಶೋಧಕ ಮನೋಜ್ ಕುಮಾರ್ (24) ಮೃತರು. ಅತುಲ್ಯ ಉದಯ್ ಕುಮಾರ್, ನರೇಶ್ ಕುಮಾರ್ ಮತ್ತು ಕಾರ್ತಿಕ್ ಶಣೈ ಎಂಬುವರ ಮುಖ, ಕೈ, ಕಾಲು ಸೇರಿದಂತೆ ದೇಹದ ವಿವಿಧೆಡೆ ಗಂಭೀರ ಗಾಯಗಳಾಗಿವೆ. ಮೂವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರು ತಿಳಿಸಿದರು.

ಮೃತ ಮನೋಜ್ ಸೇರಿದಂತೆ ನಾಲ್ವರು, ಸೂಪರ್ ವೇವ್ ಟೆಕ್ನಾಲಜಿ ಎಂಬ ಸ್ಟಾರ್ಟ್ ಅಪ್ ಕಂಪನಿಯ ಸದಸ್ಯರಾಗಿದ್ದಾರೆ. ಐಐಎಸ್ಸಿಯ ಏರೋಸ್ಪೇಸ್ ಸಂಶೋಧನಾ ಕೇಂದ್ರದಲ್ಲಿರುವ ಹೈಪರ್‌ಸಾನಿಕ್ ಮತ್ತು ಶಾಕ್ ವೇವ್ ಲ್ಯಾಬ್‌ನಲ್ಲಿ ಪ್ರಯೋಗದಲ್ಲಿ ತೊಡಗಿದ್ದಾಗ ಈ ಸ್ಫೋಟ ಸಂಭವಿಸಿದೆ. ಲ್ಯಾಬ್‌ನಲ್ಲಿ ನೈಟ್ರೋಜನ್, ಆಕ್ಸಿಜನ್, ಹೈಡ್ರೋಜನ್ ಮತ್ತು ಹೀಲಿಯಂ ಇರುವ ಸಿಲಿಂಡರ್‌ಗಳು ಇದ್ದವು. ಪ್ರಯೋಗ ಮಾಡುವ ವೇಳೆ ವಿವಿಧ ಗ್ಯಾಸ್‌ಗಳ ಮಿಶ್ರಣ, ಬಳಕೆ ವೇಳೆ ಹೆಚ್ಚು ಕಮ್ಮಿ ಉಂಟಾಗಿ ಸ್ಫೋಟ ಸಂಭವಿಸಿದೆ ಎಂದು ಪ್ರಯೋಗಾಲಯದ ಮುಖ್ಯಸ್ಥ ಜಿ. ಜಗದೀಶ್ ತಿಳಿಸಿದ್ದಾಗಿ ಅಗ್ನಿಶಾಮಕ ಅಧಿಕಾರಿಗಳು ಹೇಳಿದರು.

ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಪರೇಷನ್‌ ಮಾಡಬೇಕಾಗಿದೆ ಹಾಗೂ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಬೇಕಿದೆ ಎಂದು ಬೆಂಗಳೂರಿನ ರಾಮಯ್ಯ ಆಸ್ಪತ್ರೆ ಮಾಹಿತಿ ನೀಡಿದೆ.

ಮಲ್ಲೇಶ್ವರದಲ್ಲಿರುವ ಐಐಎಸ್ಸಿಯಲ್ಲಿ ಗ್ಯಾಸ್‌ ಸ್ಫೋಟ ಪ್ರಕರಣ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here