ಹತ್ತು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ನೆಲ್ಯಹುದಿಕೇರಿ ಕಾಲೇಜು ವಿದ್ಯಾರ್ಥಿನಿಯ ಶವ ಬುಧವಾರ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಗುಹೆಯಲ್ಲಿ ಬಿಸಾಡಿದ್ದ ಮೃತ ದೇಹವನ್ನು ಹೊರ ತೆಗೆಯಲಾಗಿದ್ದು, ಪಶ್ಚಿಮ ಬಂಗಾಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್‌, ”ವಿದ್ಯಾರ್ಥಿನಿ ಕೊಲೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಾದ ರಂಜಿತ್‌ (21) ಮತ್ತು ಸಂದೀಪ್‌ (30) ಅವರನ್ನು ಬಂಧಿಸಲಾಗಿದೆ. ರಂಜಿತ್‌ ಹಾಗೂ ಮೃತಳ ನಡುವೆ ಜಗಳವಾಗಿತ್ತು. ಆಕೆ ತನ್ನನ್ನು ಅವಮಾನಿಸಿದ್ದಾಳೆ ಎಂದು ಸೇಡು ತೀರಿಸಿಕೊಳ್ಳಲು ರಂಜಿತ್‌ ಸಂಚು ರೂಪಿಸಿದ್ದ. ವಿಷಯ ತಿಳಿದ ತನಿಖಾ ತಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸ್ನೇಹಿತ ಸಂದೀಪನೊಂದಿಗೆ ಆಕೆಯನ್ನು ಅಪಹರಿಸಿ ಕೊಲೆ ಮಾಡಿ ಎಮ್ಮೆಗುಂಡಿ ಎಸ್ಟೇಟಿನ ದೇವಾಲಯದ ಸಮೀಪ ಇರುವ ಕಲ್ಲು ಬಂಡೆಯ ಗುಹೆಯೊಳಗೆ ಶವ ಬಿಸಾಕಿದ್ದನ್ನು ಹಾಗೂ ಕೊಲೆಗೂ ಮೊದಲು ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡ,” ಎಂದು ತಿಳಿಸಿದರು.

ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫೆ.4ರಂದು ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಹರಣವಾಗಿದೆ ಎಂದು ಪೋಷಕರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು. ಫೆ.10ರಂದು ವಿದ್ಯಾರ್ಥಿನಿಯ ಬ್ಯಾಗ್‌ ಮತ್ತು ಶೂ ಸಿದ್ದಾಪುರ ಎಸ್ಟೇಟಿನ ಕಾಫಿ ತೋಟದಲ್ಲಿ ಪತ್ತೆಯಾಗಿತ್ತು.

ತನಿಖಾ ತಂಡದಲ್ಲಿದ್ದ ಕೊಡಗು ಅಪರಾಧ ಪತ್ತೆ ದಳದ ಪಿಎಸ್ಸೈ ಎಂ.ಮಹೇಶ್‌, ಮಡಿಕೇರಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಅನೂಪ್‌ ಮಾದಪ್ಪ, ಸಿದ್ದಾಪುರ ಪಿಎಸ್‌ಐ ದಯಾನಂದ, ಸಿಬ್ಬಂದಿ ಯೋಗೇಶ್‌ ಕುಮಾರ್‌, ವೆಂಕಟೇಶ್‌, ಅನಿಲ್‌, ವಸಂತ, ನಿರಂಜನ್‌, ಸಿಡಿಆರ್‌ ಸೆಲ್‌ನ ಎಂ.ಎ.ಗಿರೀಶ್‌, ಸಿ.ಕೆ.ರಾಜೇಶ್‌, ಮಂಜುನಾಥ್‌, ಪೃಥ್ವೀಶ, ಮಲ್ಲಪ್ಪ ಹಾಜರಿದ್ದರು.

Summary
ಕಾಣೆಯಾಗಿದ್ದ ಕೊಡಗು ವಿದ್ಯಾರ್ಥಿನಿ ಶವ ಪತ್ತೆ
Article Name
ಕಾಣೆಯಾಗಿದ್ದ ಕೊಡಗು ವಿದ್ಯಾರ್ಥಿನಿ ಶವ ಪತ್ತೆ
Description
ಫೆ.4ರಂದು ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಹರಣವಾಗಿದೆ ಎಂದು ಪೋಷಕರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು. ಫೆ.10ರಂದು ವಿದ್ಯಾರ್ಥಿನಿಯ ಬ್ಯಾಗ್‌ ಮತ್ತು ಶೂ ಸಿದ್ದಾಪುರ ಎಸ್ಟೇಟಿನ ಕಾಫಿ ತೋಟದಲ್ಲಿ ಪತ್ತೆಯಾಗಿತ್ತು. 

LEAVE A REPLY

Please enter your comment!
Please enter your name here