ನವದೆಹಲಿ:ತನ್ನ ಕಿಡ್ನಿ ಮಾರಾಟ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ ಬಾಂಗ್ಲಾದ ಮೊಹಮ್ಮದ್ ಗೈನಿ ಮಿಯಾನ್(35) ಎಂಬ ಯುವಕ ಅಜ್ಮೀರ್ ಷರೀಫ್ ಗೆ ಬರುವ ಉದ್ದೇಶದಿಂದ ಅಕ್ರಮವಾಗಿ ಗಡಿ ಪ್ರವೇಶಿಸಿದ್ದ. ಈತ ತನ್ನ ಕಿಡ್ನಿಯನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಹಲವು ಬಾರಿ ಭಾರತ ಪ್ರವೇಶಿಸಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ ಎಂದು ದರ್ಗಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಕಿಡ್ನಿ ಮಾರಾಟ ಮಾಡುವ ನಿಟ್ಟಿನಲ್ಲಿ ಮಿಯಾನ್ ಭಾರತಕ್ಕೆ ಬರುತ್ತಿರುವುದು ಇದು ಮೂರನೇ ಬಾರಿಯಾಗಿದೆ ಎಂದು ತಿಳಿಸಿರುವುದಾಗಿ ದರ್ಗಾ ಪೊಲೀಸ್ ಠಾಣಾಧಿಕಾರಿ ಕೈಲಾಶ್ ಬಿಶ್ನೋಯಿ ವಿವರಿಸಿದ್ದಾರೆ.

ಈತ ಮೊತ್ತ ಮೊದಲ ಬಾರಿಗೆ 2008ರಲ್ಲಿ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದ. ಬಳಿಕ ಚೆನ್ನೈನಲ್ಲಿ ಸುಮಾರು ನಾಲ್ಕು ತಿಂಗಳ ವಾಸಿಸಿದ್ದ. ಏತನ್ಮಧ್ಯೆ ಭಾಷೆಯ ಸಮಸ್ಯೆಯಿಂದಾಗಿ ಆತನಿಗೆ ಕಿಡ್ನಿ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ ಎಂದು ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ತದನಂತರ ನಾಲ್ಕು ವರ್ಷದ ಬಳಿಕ ಮಿಯಾನ್ ವೀಸಾ ಮೂಲಕ ಭಾರತಕ್ಕೆ ಆಗಮಿಸಿದ್ದ. ಮತ್ತೆ ಚೆನ್ನೈಗೆ ತೆರಳಿದ್ದ ಯುವಕ ಆಸ್ಪತ್ರೆಯೊಂದಕ್ಕೆ ತೆರಳಿ ಕಿಡ್ನಿ ಮಾರಾಟ ಮಾಡುವುದಾಗಿ ತಿಳಿಸಿದ್ದ. ಆದರೆ ಆಸ್ಪತ್ರೆಯ ವೈದ್ಯರು ಆಪರೇಶನ್ ಮಾಡಲು ನಿರಾಕರಿಸಿದ್ದರು. ಯಾಕೆಂದರೆ ಮಿಯಾನ್ ಡ್ರಗ್ ವ್ಯಸನಿಯಾಗಿದ್ದ, ಹೀಗಾಗಿ ಆತನ ದೈಹಿಕ ಸ್ಥಿತಿ ತುಂಬಾ ದುರ್ಬಲವಾಗಿದೆ ಎಂದು ಹೇಳಿರುವುದಾಗಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮಿಯಾನ್ ಭಾರತಕ್ಕೆ ಆಗಮಿಸುತ್ತಿರುವ ಉದ್ದೇಶದ ಬಗ್ಗೆ ಪೊಲೀಸರು ಈಗಾಗಲೇ ಕೇಂದ್ರ ತನಿಖಾದಳಕ್ಕೆ ಮಾಹಿತಿ ನೀಡಿರುವುದಾಗಿ ಹೇಳಿದರು. ಭಾರತದಲ್ಲಿ ಅಕ್ರಮವಾಗಿ ಅಂಗಾಂಗ ಟ್ರಾನ್ಸ್ ಪ್ಲ್ಯಾಂಟ್ ಮಾಡುವ ದಂಧೆ ನಡೆಯುತ್ತಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆಯೂ ತನಿಖಾ ದಳಕ್ಕೆ ವಿವರ ನೀಡಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಇದೀಗ ಸುಮಾರು ಎರಡು ತಿಂಗಳ ಹಿಂದೆ ಮಿಯಾನ್ ಮತ್ತೆ ಅಕ್ರಮವಾಗಿ ಗಡಿದಾಟಿ ಪಶ್ಚಿಮಬಂಗಾಳದ ಬೋನ್ಗಾವ್ ಎಂಬ ಹಳ್ಳಿಯನ್ನು ಪ್ರವೇಶಿಸಿದ್ದ. ಅಲ್ಲಿಂದ ಆತ ಕೋಲ್ಕೊತಾಗೆ ಬಂದಿದ್ದ. ಅಲ್ಲಿಂದ ರೈಲಿನಲ್ಲಿ ಅಜ್ಮೀರ್ ಗೆ ಆಗಮಿಸಿದ್ದ. ಅಲ್ಲಿ ಆರೋಪಿ ಮಿಯಾನ್ ದರ್ಗಾಕ್ಕೆ ಭೇಟಿ ನೀಡಿದ ನಂತರ ಕಿಡ್ನಿ ಮಾರಾಟ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದ. ಅಜ್ಮೀರ್ ನಲ್ಲಿ ಮೊಬೈಲ್ ಫೋನ್ ಮಾರಾಟ ಮಾಡಿ ಹುಸೈನ್ ಎಂಬಾತನನ್ನು ಸಂಪರ್ಕಿಸಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದ. ಹೀಗೆ ಹುಸೈನ್ ತಿಂಗಳಿಗೆ ಮೂರು ಸಾವಿರ ರೂಪಾಯಿಗೆ ಬಾಡಿಗೆ ಮನೆ ಮಾಡಿಕೊಟ್ಟಿರುವುದಾಗಿ ಮಿಯಾನ್ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ. ಕಳೆದ ಭಾನುವಾರ ಪೊಲೀಸರು ಹುಸೈನ್ ಮನೆ ಮೇಲೆ ದಾಳಿ ನಡೆಸಿದಾಗ ಮಿಯಾನ್ ನನ್ನು ಬಂಧಿಸಿದ್ದರು. ಅಷ್ಟೇ ಅಲ್ಲ ಪಾಸ್ ಪೋರ್ಟ್, ಬಾಂಗ್ಲಾದೇಶದ ನಾಲ್ಕು ಸಿಮ್, ಒಂದು ಪಾಕಿಸ್ತಾನದ ಸಿಮ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಿಯಾನ್ ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ವರದಿ ಹೇಳಿದೆ.

Summary
ಕಿಡ್ನಿ ಮಾರಲು 'ಗಡಿ ನುಸುಳಿ ಭಾರತ ಪ್ರವೇಶಿಸಿದ್ದ ಬಾಂಗ್ಲಾ ಯುವಕನ ಬಂಧನ'?
Article Name
ಕಿಡ್ನಿ ಮಾರಲು 'ಗಡಿ ನುಸುಳಿ ಭಾರತ ಪ್ರವೇಶಿಸಿದ್ದ ಬಾಂಗ್ಲಾ ಯುವಕನ ಬಂಧನ'?

LEAVE A REPLY

Please enter your comment!
Please enter your name here