ಬೆಂಗಳೂರು

ಡಿಸೆಂಬರ್ 5: ಕೃಷಿ ಭೂಮಿ ಪರಿವರ್ತನೆ ಸರಳೀಕರಣಕ್ಕೆ ಹೊಸ ಕಾನೂನು ತಿದ್ದುಪಡಿಯನ್ನು ಸರ್ಕಾರ ತರುತ್ತಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಅಗತ್ಯವಾದ ಭೂ ಪರಿವರ್ತನೆಯನ್ನು ಸರಳಗೊಳಿಸುವಂತಹ ಮಹತ್ವದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ರಾಜ್ಯದಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಉದ್ಯಮಗಳು, ಸೌರವಿದ್ಯುತ್ ಯೋಜನೆಗಳು, ಪ್ರವಾಸೋದ್ಯಮ ಇತ್ಯಾದಿಗಳ ಬೆಳವಣಿಗೆಗಾಗಿ ಭೂಮಿಯ ಅಗತ್ಯವಿದೆ. ಇದರ ಜೊತೆಗೆ ಭೂಮಿಯನ್ನು ಹೊಂದಿರುವವರು ಅದನ್ನು ಪರಿಣಾಮಕಾರಿ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕಾದ ಅವಶ್ಯಕತೆ ಇತ್ತು ಎಂದು ಕಂದಾಯ ಸಚಿವ ಆರ್‌ವಿ ದೇಶಪಾಂಡೆ ತಿಳಿಸಿದ್ದಾರೆ.

ಇಡೀ ಭೂ ಪರಿವರ್ತನೆ ಪ್ರಕ್ರಿಯೆ ಇದರಿಂದಾಗಿ ಆನ್‌ಲೈನ್ ಮೂಲಕ ನಡೆಯಲಿದೆ. ಇದಕ್ಕಾಗಿ ಸೂಕ್ತವಾದ ತಂತ್ರಾಂಶಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಅರ್ಜಿದಾರರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ ಜೊತೆಗೆ ಪಾರದರ್ಶಕತೆಯೂ ಬರಲಿದೆ ಎಂದು ತಿಳಿಸಿದ್ದಾರೆ.

ಸರಳ ಭೂ ಪರಿವರ್ತನೆಯನ್ನು 1964ರ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95(2) ರಡಿ ನಡೆಸಲಾಗುವುದು, ಇನ್ನುಮುಂದೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಉದ್ದೇಶಿಸುವವರು ನಾಡ ಕಚೇರಿ, ತಾಲೂಕು ಕಚೇರಿ, ಇಲ್ಲವೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಪರಿವರ್ತನೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಇದಾದ ಒಂದು ತಿಂಗಳಲ್ಲಿ ಭೂಪರಿವರ್ತನೆ ಪ್ರಕ್ರಿಯೆ ಮುಗಿಯಲಿದೆ ಎಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here