ಗದಗ : ಜಿಲ್ಲೆಯಾಗಿ ದಶಕ ಕಳೆದರೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ವ್ಯವಸ್ಥೆ ಮಾತ್ರ ಸುಧಾರಣೆ ಕಂಡಿಲ್ಲ. ಪ್ರಮುಖ ರಸ್ತೆ, ಮಾರುಕಟ್ಟೆ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸರಿಯಿಲ್ಲದ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಅದರ ಜೊತೆಗೆ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ. ಇದರಿಂದ ಸಂಚಾರ ದಟ್ಟಣೆ ಕೂಡ ಏರಿಕೆ ಕಂಡು ಬರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತಲೆಬಿಸಿ ಆರಂಭವಾಗಿದೆ.

ಗದಗ ನಗರದಲ್ಲಿ ಮೂರು ಸಂಚಾರ ಸಿಗ್ನಲ್​ಗಳಿದ್ದು, ಅದರಲ್ಲಿ ಮುಳಗುಂದ ನಾಕಾ ಹಾಗೂ ಭೂಮರಡ್ಡಿ ವೃತ್ತದಲ್ಲಿ ಮಾತ್ರ ಸಂಚಾರ ಸಿಗ್ನಲ್​ಗಳು ಕಾರ್ಯನಿರ್ವಹಿಸುತ್ತಿವೆ. ಮಹಾತ್ಮಾ ಗಾಂಧಿ ವೃತ್ತದಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್ ತಾಂತ್ರಿಕ ಕಾರಣಗಳಿಂದ ಕಳೆದ 5 ವರ್ಷಗಳಿಂದ ಬಂದ್ ಆಗಿದೆ. ಗದಗ ನಗರದಲ್ಲೇ ಪ್ರಮುಖವಾಗಿರುವ ಈ ವೃತ್ತದ ಮೂಲಕ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಮಾರುಕಟ್ಟೆಗೆ ಸಾರ್ವಜನಿಕರು ಆಗಮಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಿದ್ದರೂ ಸಿಗ್ನಲ್ ಸಮಸ್ಯೆ ಮುಂದುವರಿದಿದೆ.

2016ರ ಏಪ್ರಿಲ್ 30ಕ್ಕೆ ಜಿಲ್ಲೆಯಾದ್ಯಂತ ಬೈಕ್, ಕಾರು, ಟ್ರ್ಯಾಕ್ಟರ್, ಟ್ರಕ್ ಹಾಗೂ ಇತರೆ ಸೇರಿ 1,54,195 ವಾಹನಗಳಿದ್ದವು. 2019ರ ಜನವರಿ 31ರ ವರೆಗೆ ಜಿಲ್ಲೆಯಲ್ಲಿ 1,99,755 ವಾಹನಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದು, ಮೂರು ವರ್ಷಗಳ ಅಂತರದಲ್ಲಿ ಜಿಲ್ಲೆಯಲ್ಲಿ 45,560 ವಾಹನಗಳು ಹೆಚ್ಚಿವೆ.

ಗದಗ-ಬೆಟಗೇರಿ ಅವಳಿ ನಗರ ಸೇರಿ ತಾಲೂಕೊಂದರಲ್ಲಿ 2016ರ ಏಪ್ರಿಲ್ 30ರ ವೇಳೆಗೆ 71,322 ವಾಹನಗಳಿದ್ದರೆ, 2019ರ ಜನವರಿ 31ರವರೆಗೆ 99,102 ವಾಹನಗಳಿದ್ದು, ಮೂರು ವರ್ಷಗಳ ಅಂತರದಲ್ಲಿ 27,780 ವಾಹನಗಳು ನೋದಣಿಯಾಗಿವೆ. ಜಿಲ್ಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಏರಿಕೆಯಾದ 45,560 ವಾಹನಗಳ ಪೈಕಿ ಗದಗ ನಗರ ಹಾಗೂ ತಾಲೂಕೊಂದರಲ್ಲಿಯೇ 27,780 ವಾಹನಗಳು ಹೆಚ್ಚಿಕೆಯಾಗಿರುವುದು ಗದಗ-ಬೆಟಗೇರಿ ಅವಳಿ ನಗರದಲ್ಲಿ ರಸ್ತೆ ಸಂಚಾರಕ್ಕೂ ತೊಡಕುಂಟು ಮಾಡಿದೆ.

ತಪ್ಪದ ಸಂಚಾರ ದಟ್ಟಣೆ ಕಿರಿಕಿರಿ: ನಗರದಲ್ಲಿ ಜನದಟ್ಟಣೆಯ ಪ್ರದೇಶಗಳಾದ ಮಾರುಕಟ್ಟೆ, ಮಹಾತ್ಮಾ ಗಾಂಧಿ ವೃತ್ತ, ಬಸ್ ನಿಲ್ದಾಣ, ಜೆಟಿ ಮಠದ ರಸ್ತೆ, ರೋಟರಿ ವೃತ್ತ ಹಾಗೂ ಹಳೇ ಜಿಲ್ಲಾಧಿಕಾರಿ ಕಚೇರಿ ವೃತ್ತದ ಬಳಿ ಸಂಚಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ. ನಗರದ ಪ್ರಮುಖ ಹೋಟೆಲ್​ಗಳು, ದೊಡ್ಡ ದೊಡ್ಡ ಅಂಗಡಿಗಳ ಮುಂದೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದ ಕಾರಣ ವಾಹನಗಳನ್ನು ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಮಾಮೂಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗುತ್ತದೆ. ನಿತ್ಯ ಸಂಚರಿಸುವ ಸಾವಿರಾರು ಜನರು ಹರಸಾಹಸ ಪಡುವಂತಾಗಿದೆ.

ಚತುಷ್ಪಥ ರಸ್ತೆ ನನೆಗುದಿಗೆ: ನಗರದ ಭೂಮರಡ್ಡಿ ವೃತ್ತದಿಂದ ಬೆಟಗೇರಿ ಮಾರ್ಗವಾಗಿ ನರಸಾಪುರ ಗ್ರಾಮದವರೆಗೆ ಚತುಷ್ಪಥ ರಸ್ತೆ ನಿರ್ವಣಕ್ಕೆ ಕೇಂದ್ರ ಸರ್ಕಾರದಿಂದ ನಗರ ಅಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ. ಒತ್ತುವರಿ ತೆರವು ಸಮಸ್ಯೆಯಿಂದ ಚತುಷ್ಪಥ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದಿದೆ. ಇದರಿಂದ ಸುಗಮ ಸಂಚಾರಕ್ಕೂ ಅಡಚಣೆಯಾದಂತಾಗಿದೆ.

ಗದಗ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟಕರವಾಗಿದೆ. ಸ್ವಲ್ಪ ಜಾಗೃತಿ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ಪೊಲೀಸ್ ಇಲಾಖೆಯು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಿಬ್ಬಂದಿ ನೇಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.

| ಅಶೋಕ ಹೊಸೂರ, ಗದಗ ನಿವಾಸಿ|

ನಗರದ ಪ್ರಮುಖ ರಸ್ತೆಗಳು ಕಿರಿದಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಬಗೆಹರಿಸಲು ಸ್ಟೇಷನ್ ರಸ್ತೆಯಲ್ಲಿ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜತೆಗೆ, ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಬೃಹತ್ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ತಿಳಿಹೇಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಲಾಗಿದೆ.

Summary
Article Name
ಗದಗ : ಮುಂದುವರಿದಿದೆ ಟ್ರಾಫಿಕ್ ಗೋಳು !

LEAVE A REPLY

Please enter your comment!
Please enter your name here