ಉಡುಪಿ:ಗುರು ಶಿಷ್ಯಪರಂಪರೆಯಿಂದಷ್ಟೇ ವೇದ ಪರಂಪರೆ ರಕ್ಷಣೆ, ಮುಂದುವರಿಕೆ ಸಾಧ್ಯ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧಿಶತೀರ್ಥ ಶ್ರೀಪಾದರು ಹೇಳಿದ್ದಾರೆ. 

ಅವರು ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದ ವಿದ್ಯಾ ಪ್ರತಿಷ್ಠಾನದ ವತಿಯಿಂದ ಪರ್ಯಾಯ ಪಲಿಮಾರು ಮಠ, ಶ್ರೀ ಕೃಷ್ಣ ಮಠ, ಎಸ್‌ಎಮ್‌ಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಪೂರ್ಣ ಪ್ರಜ್ಞ ಸಂಶೋಧನ ಮಂದಿರದ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಕ್ಷೇತ್ರೀಯ ವೇದ ಸಮ್ಮೇಳನ ಸಮಾರೋಪದಲ್ಲಿ ಬುಧವಾರ ಆಶೀರ್ವಚನ ನೀಡಿದರು. 

ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಬ್ರಹ್ಮನಿರುವವರೆಗೆ ವೇದವಿರುತ್ತದೆ, ಅದು ನಿತ್ಯ, ಸತ್ಯ. ಯುವಕರು ವೇದವಿದ್ಯೆಯ ರಕ್ಷ ಣೆಗೆ ಮುಂದಾಗಬೇಕು ಎಂದರು. 

ಉಜ್ಜಯಿನಿಯ ಮಹರ್ಷಿ ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನದ ಹಣಕಾಸು ಅಧಿಕಾರಿ ಸಂಜಯ ಶ್ರೀವಾಸ್ತವ ಮಾತನಾಡಿ, ವೇದ ಸಮ್ಮೇಳನಗಳನ್ನು ದೇಶದಾದ್ಯಂತ ನಡೆಸಿ ವೇದದ ಅರಿವು ಮೂಡಿಸುವ ಕೆಲಸವಾಗುತ್ತಿದೆ ಎಂದರು. 

ವೇದ ಭಾಷ್ಯ ರತ್ನ ಪ್ರೊ. ಆರ್‌. ಕೃಷ್ಣಮೂರ್ತಿ ಶಾಸ್ತ್ರಿ, ಶತಾವಧಾನಿ ಪ್ರೊ. ಚಿರ್ರಾವುರಿ ಶ್ರೀರಾಮ ಶರ್ಮಾ, ಅಗ್ನಿಹೋತ್ರಿಗಳಾದ ಬ್ರಹ್ಮಶ್ರೀ ತಲಾರೆ ವಾಮನ ಭಟ್ಟರನ್ನು ಸಮ್ಮಾನಿಸಲಾಯಿತು. ವಿದ್ವಾನ್‌ ಪಾಲ್ಘಾಟ್‌ ರಮೇಶ ದ್ರಾವಿಡ ಶಾಸ್ತ್ರಿ ಸಮ್ಮೇಳನದ ಅನುಭವ ತಿಳಿಸಿದರು. 

ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕ ಡಾ. ಆನಂದತೀರ್ಥ ವಿ. ನಾಗಸಂಪಿಗೆ ಸ್ವಾಗತಿಸಿದರು. ಪರ್ಯಾಯ ಪಲಿಮಾರು ಮಠದ ದಿವಾನ ವಿದ್ವಾನ್‌ ಎಸ್‌. ವೇದವ್ಯಾಸ ತಂತ್ರಿ, ಎಸ್‌.ಎಮ್‌.ಎಸ್‌.ಪಿ ಸಭೆಯ ಕಾರ್ಯದರ್ಶಿ ರತ್ನಕುಮಾರ್‌, ಎಸ್‌.ಎಮ್‌.ಎಸ್‌.ಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎನ್‌. ಲಕ್ಷ್ಮೀನಾರಾಯಣ ಭಟ್ಟರ ಉಪಸ್ಥಿತರಿದ್ದರು. ಜ್ಯೌತಿಷ ಸಹಾಯಕ ಪ್ರಾಧ್ಯಾಪಕ ಡಾ. ಡಿ. ಶಿವಪ್ರಸಾದ ತಂತ್ರಿ ಕಾರ್ಯಕ್ರಮ ನಿರ್ವಹಿಸಿದರು.ವಿದ್ವಾನ್‌ ಕೌಂಜೂರು ಚಂದ್ರಶೇಖರ ಅಡಿಗ ವೇದ ಘೋಷ ಮಾಡಿದರು. ವೇದಾಂತ ಪ್ರಾಧ್ಯಾಪಕ ಪ್ರೊ. ಷಣ್ಮುಖ ಹೆಬ್ಬಾರ್‌ ವಂದಿಸಿದರು. 

LEAVE A REPLY

Please enter your comment!
Please enter your name here