ಚಿಕ್ಕಮಗಳೂರು

ಡಿಸೆಂಬರ್ 06: ಅದು ಬಡವರಿಗೆ ಮೂರೊತ್ತು ಅನ್ನ ನೀಡುವ ಉದ್ದೇಶದಿಂದ ರೂಪುಗೊಂಡ ಯೋಜನೆ. ಅಂತಹ ಯೋಜನೆ ಈಗ ರಾಜಕೀಯ ರೂಪ ಪಡೆದುಕೊಂಡಿದೆ. ಅದರಲ್ಲೂ ಇವತ್ತು ಮಲೆನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡಿದ್ದು, ಈ ವೇಳೆಯೂ ರಾಜಕೀಯ ದೊಂಬರಾಟ ನಡೆಯಿತು. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಮಂತ್ರಣ ನೀಡಿಲ್ಲ ಎಂದು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಉದ್ಘಾಟನೆ ವೇಳೆ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿ ಇಂದಿರಾ ಕ್ಯಾಂಟಿನ್ ಮುಂದೆಯೇ ಹೈಡ್ರಾಮವೇ ನಡೆದುಹೊಯ್ತು. ಹೌದು, ಇಂದು ಗುರುವಾರ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಾಯಿತು. ಮೊದಲಿಗೆ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು.

ಈ ವೇಲೆ ಸಚಿವರು ಉದ್ಘಾಟನೆಗೆ ಬರುವ ಮುನ್ನವೇ ಹೈಡ್ರಾಮ ನಡೆಯಿತು. ತಮಗೆ ಆಹ್ವಾನ ನೀಡಿಲ್ಲ ಎಂದು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಸೇರಿದಂತೆ ಬಿಜೆಪಿ ಸದಸ್ಯರುಗಳೂ ಸಹ ಪ್ರತಿಭಟನೆ ನಡೆಸಿದರು. ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಇಂದೀರಾ ಕ್ಯಾಂಟೀನ್ ಉದ್ಘಾಟನೆ ಇನ್ನು ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿಟಿ ರವಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಆ ನಂತರ ಸಚಿವ ಕೆಜೆ ಜಾರ್ಜ್ ಶಾಸಕ ಸಿಟಿ ರವಿ ಜೊತೆಗೂಡಿಯೇ ಇಂದೀರಾ ಕ್ಯಾಂಟೀನ್ ಉದ್ಘಾಟನೆ ಮಾಡಿದರು.

ಖಂಡನೆ, ಪ್ರತಿಭಟನೆ ಇನ್ನು ಪ್ರತಿಭಟನೆ ವೇಳೆ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಮತ್ತು ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದನ್ನು ಖಂಡಿಸಲಾಯಿತು. ಅಷ್ಟೇ ಅಲ್ಲ, ಶಾಸಕರ ವಿರುದ್ಧ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವಂತೆ ಶಾಸಕ ಸಿ ಟಿ ರವಿ ನೇತೃತ್ವದಲ್ಲಿ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯ್ತು.

ಶಾಸಕ ಸಿಟಿ ರವಿ ಆಗ್ರಹ: ಅಲ್ಲದೇ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಂಬಂಧಿಸಿದಂತೆ ಶಿಷ್ಟಾಚಾರ ಉಲ್ಲಂಘಿಸಿದ ಜಿಲ್ಲಾಡಳಿತದ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಸಿಟಿ ರವಿ ಆಗ್ರಹಿಸಿದ್ದಾರೆ.

ರಾಜಕೀಯ ದೊಂಬರಾಟಕ್ಕೆ ಕಾರಣ ಒಟ್ಟಾರೆ ಬಡವರಿಗೆ ಅನ್ನ ನೀಡುವ ಉದ್ದೇಶದಿಂದ ರೂಪಗೊಂಡ ಯೋಜನೆಯೊಂದು ಜಿಲ್ಲೆಯಲ್ಲಿ ಮೊದಲಬಾರಿಗೆ ಪ್ರಾರಂಭವಾಗುವಾಗಲೇ ರಾಜಕೀಯ ದೊಂಬರಾಟಕ್ಕೆ ಕಾರಣವಾಗಿದೆ. ಮುಂದೆ ಇದು ಯಾವ ರೂಪ ಪಡೆದುಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.

:

LEAVE A REPLY

Please enter your comment!
Please enter your name here