ಏಳು ಕ್ಷೇತ್ರ ಬಿಟ್ಟುಕೊಟ್ಟ ಕಾಂಗ್ರೆಸ್!

ಉತ್ತರ ಪ್ರದೇಶದಲ್ಲಿ ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳದಿದ್ದರೂ, ಎಸ್​ಪಿ-ಬಿಎಸ್​ಪಿಗೆ 7 ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಮೈನ್​ಪುರಿ, ಕನೌಜ್, ಫಿರೋಜಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಜತೆಗೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಆರ್​ಎಲ್​ಡಿಯ ಜಯಂತ್ ಚೌಧರಿ, ಅಜಿತ್ ಸಿಂಗ್ ಸ್ಪರ್ಧಿಸುವ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರಲು ನಿರ್ಧರಿಸಿದೆ. ಕಾಂಗ್ರೆಸ್ ಮೈತ್ರಿಪಕ್ಷವಾಗಿರುವ ‘ಅಪ್ನಾ ದಳ’ಕ್ಕೆ ಎರಡು ಕ್ಷೇತ್ರ ನೀಡಲಾಗುವುದು ಎಂದು ರಾಜ್ ಮಾಹಿತಿ ನೀಡಿದ್ದಾರೆ.

ಮೋದಿ ಪರ ಮತ ಕೇಳಿದ್ದೇ ತಪ್ಪಾಯ್ತು!

ಮಗನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರಧಾನಿ ನರೇಂದ್ರ ಮೋದಿಗೆ ಮತಚಲಾಯಿಸಿ’ ಎಂದು ಮುದ್ರಿಸಿದ್ದ ವ್ಯಕ್ತಿಗೆ ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ. ಉತ್ತರಾಖಂಡದ ಜೋಶಿಕೊಲ ಗ್ರಾಮದ ನಿವಾಸಿ ಜಗದೀಶ್ ಚಂದ್ರ ಜೋಶಿ ಪುತ್ರನ ವಿವಾಹ ಆಮಂತ್ರಣದಲ್ಲಿ, ‘ಮದುವೆಗೆ ಉಡುಗೊರೆ ತರಬೇಡಿ. ಏ.11ರಂದು ನಡೆಯುವ ಚುನಾವಣೆಯಲ್ಲಿ ದೇಶಹಿತಕ್ಕಾಗಿ ಮೋದಿಗೆ ಮತ ಚಲಾಯಿಸಿ’ ಎಂದು ಮುದ್ರಿಸಿದ್ದರು. ಇದು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿರುವುದರಿಂದ ಜೋಶಿಗೆ ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಜೋಶಿ ಕ್ಷಮೆಯಾಚಿಸಿದ್ದು, ‘ಮಕ್ಕಳು ಹೇಳಿದರೆಂದು ಈ ರೀತಿ ಮುದ್ರಿಸಿದ್ದೆ’ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ತಯಾರಿಗಳ ಬಗ್ಗೆ ಪಕ್ಷದ ಕಾರ್ಯಕರ್ತರ ಜತೆಗೆ ರ್ಚಚಿಸುವ ಉದ್ದೇಶದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಲಖನೌ ತಲುಪಿದ್ದಾರೆೆ. ಅವರು ಸೋಮವಾರ ಪ್ರಯಾಗ್​ರಾಜ್​ನಿಂದ ವಾರಾಣಸಿವರೆಗೆ ಗಂಗಾಮಾರ್ಗವಾಗಿ ಸಂಚರಿಸಲಿದ್ದು, ಜನರನ್ನು ಭೇಟಿಯಾಗಲಿದ್ದಾರೆ. ಮಾ. 18ರಿಂದ 20ರವರೆಗೆ ಪ್ರಯಾಗ್​ರಾಜ್, ಬದೋಹಿ, ಮಿರ್ಜಾಪುರ, ವಾರಾಣಸಿಯಲ್ಲಿ ಕಾರ್ಯಕರ್ತರ, ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇದೇ ವೇಳೆಯಲ್ಲಿ ಪ್ರಿಯಾಂಕಾ ಹಲವು ಸಂಘಟನೆಗಳ ಮುಖ್ಯಸ್ಥರನ್ನೂ ಭೇಟಿಯಾಗಲಿದ್ದಾರೆ.

ಪ್ರಿಯಾಂಕಾ ಬಹಿರಂಗ ಪತ್ರ: ಉತ್ತರಪ್ರದೇಶದ ಹಲವು ಪ್ರದೇಶಗಳ ಭೇಟಿ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಬಹಿರಂಗ ಪತ್ರ ಬರೆದಿದ್ದು, ಇದರಲ್ಲಿ ತಮ್ಮನ್ನು ‘ಕಾಂಗ್ರೆಸ್​ನ ಸಿಪಾಯಿ’ ಎಂದು ಹೇಳಿಕೊಂಡಿದ್ದಾರೆ. ಉತ್ತರಪ್ರದೇಶ ಸರ್ಕಾರ ಯುವಕರು, ಮಹಿಳೆಯರು ಮತ್ತು ನೌಕರರನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ಜನರ ಜತೆ ಸೇರಿ ಭವಿಷ್ಯದ ರಾಜನೀತಿಯನ್ನು ಬದಲಾಯಿಸುವ ಜವಾಬ್ದಾರಿ ತನ್ನ ಮೇಲಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here