ಬೆಂಗಳೂರು: ”ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯಾಗಲಿದೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ”ಅಲ್ಲದೆ, ನಿಗಮ ಮಂಡಳಿ ನೇಮಕವೂ ಅಂದೇ ಆಗಲಿದೆ” ಎಂದೂ ತಿಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆ ಮುಕ್ತಾಯವಾದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.

”ಜೆಡಿಎಸ್‌ನ 10 ಹಾಗೂ ಕಾಂಗ್ರೆಸ್‌ನ 20 ಶಾಸಕರಿಗೆ ಬೋರ್ಡ್‌ಗೆ ನೇಮಕ ಮಾಡಲಾಗುವುದು. ಅಲ್ಲದೆ, ಪಾರ್ಲಿಮೆಂಟರಿ ಸೆಕ್ರೆಟರಿಗಳನ್ನೂ ನೇಮಕ ಮಾಡುತ್ತೇವೆ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ನಾವು ತೀರ್ಮಾನ ಮಾಡಿದ್ದೇವೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

”ಬಹಳ ದಿನಗಳ ನಂತರ ನಾವು ಸಭೆ ಸೇರಿದ್ದೆವು. ಅಧಿವೇಶನ ಶೀಘ್ರದಲ್ಲೇ ಆರಂಭವಾಗಲಿದೆ. ಇಂದಿನ ಮುಖ್ಯ ನಿರ್ಧಾರವೆಂದರೆ ಇದೇ ತಿಂಗಳ 22ರಂದು ಸಂಪುಟ ವಿಸ್ತರಣೆ ಮಾಡುವುದು, ಬೋರ್ಡ್ ಕಾರ್ಪೊರೇಷನ್ ಗಳಿಗೂ ಅಂದೇ ಕೆಲವು ನೇಮಕಾತಿ ಮಾಡಲಾಗುವುದು. ಅಲ್ಲದೆ, ಹತ್ತು ಜನ ಜೆಡಿಎಸ್ ಹಾಗು ಇಪ್ಪತ್ತು ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡಲಾಗುವುದು. ಸರಕಾರ ಸುಗಮವಾಗಿ ನಡೆಯುವ ದೃಷ್ಟಿಯಿಂದ ಸಾಕಷ್ಟು ಮಾತುಕತೆ ಮಾಡಲಾಗಿದೆ” ಎಂದು ಸಭೆ ಬಳಿಕ ಸಿದ್ದರಾಮಯ್ಯ ತಿಳಿಸಿದ್ದಾರೆ.

”ಬಹಳ ದಿನಗಳಿಂದ ಸಂಪುಟ ವಿಸ್ತರಣೆ ನಿರೀಕ್ಷೆಯಿತ್ತು. ಆದರೆ, ಸೋಮವಾರವೇ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ಇನ್ನೂ ರಾಹುಲ್ ಗಾಂಧಿಯವರ ಜತೆ ಮಾತನಾಡಬೇಕಿದೆ. ಹೀಗಾಗಿ, ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಮಾಡುವ ತೀರ್ಮಾನ ಮಾಡಲಾಗಿದೆ” ಎಂದರು.

”ಅಲ್ಲದೆ, ಯಾವ ಶಾಸಕರು ರಿಸೈನ್ ಮಾಡಲ್ಲ. ನೀವೇ ರಾಜೀನಾಮೆ ಕೊಡಿಸೋಕೆ ಹೊರಟಿದ್ದೀರ. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಬಿಡಲ್ಲ ಅಂತ ಹೇಳಿದ್ದಾರೆ. ಆದರೂ ಈ ಬಗ್ಗೆ ಸುಮ್ಮನೆ ಯಾರೋ ಹುಟ್ಟುಹಾಕ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಜತೆಗೆ, ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಒಮ್ಮೆ ಆಪರೇಷನ್ ಕಮಲ ಮಾಡಿ ಗೆದ್ದಿದ್ದಾರೆ. ಆದರೆ, ಅದು ಪದೇ ಪದೇ ಆಗುವುದಿಲ್ಲ” ಎಂದು ಬಿಜೆಪಿ ವಿರುದ್ಧ ಟಾಂಗ್ ಕೊಟ್ಟರು.

ಇನ್ನೊಂದೆಡೆ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ”ಪಾಪ ಯಾವ ದೇಶದಲ್ಲಿ ಭೂಕಂಪವಾಗುತ್ತದೆಯಂತೆ. ಅವರಿಗೆ ಏನು ಗೊತ್ತು. ಅವರು ಇನ್ನೊಂದು ಮಾತು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ಗೊತ್ತು ಎಂದು. ಯಾರೋ ಹೇಳಿದ್ದನ್ನು ಅವರು ಹೇಳಿದ್ದಾರೆ” ಎಂದು ಕೇಂದ್ರ ಸಚಿವರ ಹೇಳಿಕೆಗೆ ಮಾಜಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here