ಬೆಂಗಳೂರು: ದಶಕಗಳ ಕಾಲ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಈ ಬಾರಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸಲು ಸುರಕ್ಷಿತ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.
ನಿನ್ನೆ ಘೋಷಣೆಯಾದ ಸೀಟು ಹಂಚಿಕೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಜೆಡಿಎಸ್ ಗೆ 8 ಕ್ಷೇತ್ರಗಳು ಮತ್ತು ಕಾಂಗ್ರೆಸ್ ಗೆ 20 ಕ್ಷೇತ್ರಗಳು ಸಿಕ್ಕಿವೆ. ಮೂಲಗಳಿಂದ ತಿಳಿದುಬಂದಿರುವ ಪ್ರಕಾರ ಬೆಂಗಳೂರು ಉತ್ತರ ಕ್ಷೇತ್ರ ದೇವೇಗೌಡರಿಗೆ ಅಷ್ಟು ಸುರಕ್ಷಿತವಲ್ಲ, ಹೀಗಾಗಿ ತುಮಕೂರಿನಿಂದ ಸ್ಪರ್ಧಿಸಲು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಇದುವರೆಗೆ ಯಾವುದೇ ನಿರ್ಧಾರವನ್ನು ಅವರು ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ.

ಆದರೆ ಜೆಡಿಎಸ್ ನಾಯಕರು ಹೇಳುವ ಪ್ರಕಾರ ಈ ಎರಡೂ ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ನಿಂತರೆ ದೇವೇಗೌಡರು ಜಯಗಳಿಸುವ ಸಾಧ್ಯತೆಯಿದೆ. ಬೆಂಗಳೂರು ಉತ್ತರ ಕ್ಷೇತ್ರದಿಂದಲೂ ಅವರು ಸ್ಪರ್ಧಿಸುವುದನ್ನು ಜನ ಬಯಸುತ್ತಿದ್ದಾರೆ ಎನ್ನುತ್ತಾರೆ ಜೆಡಿಎಸ್ ನ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ ಆರ್.
ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತಗಳ ಮೇಲೆ ಜೆಡಿಎಸ್ ಹೆಚ್ಚು ಅವಲಂಬಿತವಾಗಿದ್ದು ವಿಶ್ಲೇಷಕರ ಪ್ರಕಾರ ಬೆಂಗಳೂರು ಉತ್ತರ ದೇವೇಗೌಡರಿಗೆ ಅಷ್ಟೊಂದು ಸುರಕ್ಷಿತ ಕ್ಷೇತ್ರವಲ್ಲ. ಜೆಡಿಎಸ್ ಗೆ ಸಿಕ್ಕಿರುವ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5,ಜೆಡಿಎಸ್ 2 ಮತ್ತು ಬಿಜೆಪಿ 1 ಕ್ಷೇತ್ರವನ್ನು ಒಳಗೊಂಡಿದೆ. ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಮುಂದಾದರೆ ಅವರು ಕಾಂಗ್ರೆಸ್ ನ್ನು ಹೆಚ್ಚು ಅವಲಂಬಿತವಾಗಿರಬೇಕಾಗುತ್ತದೆ.
ಬೆಂಗಳೂರು ಉತ್ತರದಲ್ಲಿ ಈಗಾಗಲೇ ಸದಾನಂದ ಗೌಡರಿದ್ದಾರೆ.ಅವರು ಮೋದಿ ಅಲೆಯಿಂದಾಗಿ ಗೆದ್ದರೆ ಹೊರತು ಒಕ್ಕಲಿಗ ಮತಗಳಿಂದಲ್ಲ, ನಗರ ಪ್ರದೇಶದಲ್ಲಿ ಜೆಡಿಎಸ್ ಗೆ ಹಾಸನ, ಮಂಡ್ಯದಲ್ಲಿರುವಂತೆ ಒಕ್ಕಲಿಗ ಮತದ ಬೆಂಬಲ ಅಷ್ಟೊಂದು ಇಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಮೋಹನ್ ರಾಮ್.

LEAVE A REPLY

Please enter your comment!
Please enter your name here