ಮೈಸೂರಿನ ಜೆಎಸ್ ಎಸ್‌ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸದ್ಯ ಈ ಕಾಲೇಜು ದೇಶದಲ್ಲಿಯೇ ಅತಿಹೆಚ್ಚು ದೇಹದಾನಿಗಳನ್ನು ಹೊಂದಿದ್ದು, ಅಂಗರಚನಾ ವಿಭಾಗ ‘ಹೌಸ್‌ಫುಲ್‌’ ಆಗಿದೆ.

ಜೆಎಸ್ ಎಸ್‌ ದೇಹದಾನ ಸಂಸ್ಥೆ ಆರಂಭವಾಗಿದ್ದು 1995ರಲ್ಲಿ. ಈವರೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ 2,980 ದಾಟಿದೆ. ಇವರಲ್ಲಿ ಸಹಜ ಸಾವು ಕಂಡ 373 ಮಂದಿಯ ದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ.

ಪ್ರತಿ ವರ್ಷ 15ರಿಂದ 20 ದೇಹಗಳನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತದೆ.

ಸದ್ಯ ಇಲ್ಲಿ ಇನ್ನೂ 150 ದೇಹಗಳಿವೆ. ಇವುಗಳ ಸಂರಕ್ಷಣೆಗೆ ವಿಶೇಷ ವಿನ್ಯಾಸದ ಸ್ಟೀಲ್ ಟ್ಯಾಂಕ್‌’ ಮಾಡಿಸಲಾಗಿದೆ.

ಒಂದು ಟ್ಯಾಂಕಿನಲ್ಲಿ 10 ದೇಹ ಇಡಬಹುದು. ಈಗ 15 ಟ್ಯಾಂಕುಗಳೂ ಭರ್ತಿಯಾಗಿವೆ.
ಅದಾಗ್ಯೂ ದೇಹದಾನ ಮಾಡುವವರು ಇದ್ದಾರೆ. ಹಲವರನ್ನು ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಿಗೆ ಹೋಗುವಂತೆ ಸಲಹೆ ನೀಡಿದ್ದೇವೆ ಎನ್ನುತ್ತಾರೆ ಕಾಲೇಜಿನ ಅನಾಟಮಿ ಹಿರಿಯ ಪ್ರಾಧ್ಯಾಪಕ ಡಾ.ಎನ್‌.ಎಂ.ಶ್ಯಾಮಸುಂದರ್.

2017ರಲ್ಲಿ 34 ದೇಹಗಳನ್ನು ನೀಡಲಾಗಿದೆ. ಮೃತಪಟ್ಟ 8ರಿಂದ 10 ಗಂಟೆಯೊಳಗೆ ದೇಹವನ್ನು ಕಾಲೇಜಿಗೆ ಹಸ್ತಾಂತರಿಸಬೇಕು. ಅದಾದ ನಂತರ ದೇಹಕ್ಕೆ ಫಾರ್ಮಾಲಿನ್ ಇಂಜೆಕ್ಷನ್ ಕೊಡಬೇಕು.

ಇದರಿಂದ ದೇಹವನ್ನು ಎಷ್ಟು ವರ್ಷವಾದರೂ ಕಾಪಾಡಬಹುದು. ದೇಹವನ್ನು ಹೂತರೆ ಮಣ್ಣಾಗುತ್ತದೆ, ಸುಟ್ಟರೆ ಬೂದಿಯಾಗುತ್ತದೆ. ದಾನ ಮಾಡಿದರೆ ಸದುಪಯೋಗವಾಗುತ್ತದೆ ಎಂಬುದು ವೈದ್ಯರ ಸಲಹೆ.

ಸಂಬಂಧಿಗಳು ಮೃತಪಟ್ಟವರನ್ನು 15 ದಿನಗಳ ನಂತರವೂ ನೋಡಿಕೊಂಡು ಹೋಗಬಹುದು. ಆದರೆ ಬಹಳಷ್ಟು ಮಂದಿ ಆತ್ಮಶಾಂತಿ ಸಿಗುತ್ತದೆ ಎಂಬ ಕಾರಣಕ್ಕೆ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರ ವೇರಿಸುತ್ತಾರೆ. ಆದರೆ, ಶಾಂತಿ ಬೇಕಾಗಿರುವುದು ಆತ್ಮಕ್ಕೆ ಹೊರತು ದೇಹಕ್ಕಲ್ಲ. ಈ ದೃಷ್ಟಿಯಲ್ಲಿ ದೇಹದಾನ ಮಾಡುವುದೇ ಶ್ರೇಷ್ಠ ಸಂಸ್ಕಾರ ಎನ್ನುವುದು ವೈದ್ಯರ ಸಲಹೆ.

ಸದ್ಯ ದೇಹದಾನದ ನಿಯಮ ಸರಳಗೊಂಡಿವೆ. ಜಾಗೃತಿ ಹೆಚ್ಚಾಗಿದೆ. ಇದರಿಂದಾಗಿ ದಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮರಣ ಪ್ರಮಾಣಪತ್ರ ಅಥವಾ ವೈದ್ಯರ ಪ್ರಮಾಣಪತ್ರ ನೀಡಿದರೆ ಸಾಕು. ಸತ್ತ 6 ತಾಸಿನೊಳಗೆ ಕೊಟ್ಟರೆ ಕಣ್ಣುಗಳು ಉಪಯೋಗಕ್ಕೆ ಬರುತ್ತವೆ, 12 ತಾಸಿನೊಳಗೆ ಕೊಟ್ಟರೆ ಮಾತ್ರ ದೇಹ ಉಪಯೋಗಕ್ಕೆ ಬರುತ್ತದೆ.

18 ವರ್ಷ ಮೇಲಿನ, ಸಹಜ ಸಾವುಗಳನ್ನು ಮಾತ್ರ ದಾನಕ್ಕೆ ಪರಿಗಣಿಸಲಾಗುತ್ತದೆ. ಆತ್ಮಹತ್ಯೆ, ಕೊಲೆ, ಅಪಘಾತಗಳಲ್ಲಿ ಮೃತಪಟ್ಟವರನ್ನು ಪಡೆಯುವುದಿಲ್ಲ. ಆಸ್ತಿ ಜಗಳ ಇದ್ದವರು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಬದುಕಿದ್ದ ಮನುಷ್ಯನ ಸಮಸ್ಯೆಯನ್ನು ಸುಲಭವಾಗಿ ಮುಗಿಸಬಹುದು. ಸತ್ತವರ ಸಮಸ್ಯೆ ಅಷ್ಟು ಸುಲಭವಲ್ಲ.

ಇದರಲ್ಲಿ ಕಾನೂನು ತೊಡಕು ಬರುವುದರಿಂದ ಆಸ್ಪತ್ರೆಗಳೇ ಈ ನಿಯಮ ಮಾಡಿಕೊಂಡಿವೆ ಎನ್ನುವುದು ಅವರ ಮಾತು. ಒಟ್ಟಾರೆ ಸತ್ತ ಮೇಲೆ ನಮ್ಮ ದೇಹ ಏನಕ್ಕೂ ಪ್ರಯೋಜನ ಬರುವುದಿಲ್ಲ ಎಂಬ ಜನರಿಗೆ ಈ ದೇಹದಾನ ಮಾಡುವ ಕುಟುಂಬಗಳು ಮಾದರಿಯಾಗಲಿ ಎಂಬುದೇ ನಮ್ಮ ಆಶಯ.

LEAVE A REPLY

Please enter your comment!
Please enter your name here