ಹೊಸದಿಲ್ಲಿ: ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಸಿಬಿಐ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ಮಹತ್ವದ ಆದೇಶ ತಮಗೆ ಸಂದ ನೈತಿಕ ಜಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡರು ಹೇಳಿಕೊಂಡಿದ್ದಾರೆ.

ಹಗರಣದ ತನಿಖೆಗೆ ಪಶ್ಚಿಮ ಬಂಗಾಳ ಸರಕಾರ ಅಡ್ಡಿಪಡಿಸುತ್ತಿದ್ದು ಅದರ ವಿರುದ್ಧ ಸಿಬಿಐ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಅಲ್ಲದೆ ತನಿಖೆಗೆ ಪೂರ್ಣವಾಗಿ ಸಹಕರಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಕಮಿಷನರ್‌ಗೆ ಸೂಚಿಸಿದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ತಟಸ್ಥ ಸ್ಥಳವೊಂದರಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕುಮಾರ್‌ಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದ್ದು, ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ಸಿಬಿಐಗೂ ಸೂಚಿಸಿದೆ.

ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಕೂಡಲೇ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ- ಇಬ್ಬರೂ ಇದು ತಮಗೆ ಸಂದ ನೈತಿಕ ಜಯ ಎಂದು ಹೇಳಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?
‘ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಇದು ನಮಗೆ ಸಂದ ನೈತಿಕ ಜಯ. ನ್ಯಾಯಾಂಗ ಮತ್ತು ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ನಮಗೆ ಪೂರ್ಣ ಗೌರವವಿದೆ. ಆದೇಶಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ವಿಚಾರಣೆಗೆ ತಾವು ಹಾಜರಾಗುವುದಿಲ್ಲ ಎಂದು ರಾಜೀವ್ ಕುಮಾರ್ ಯಾವತ್ತೂ ಹೇಳಿರಲಿಲ್ಲ ಎಂದು ಮಮತಾ ಹೇಳಿಕೊಂಡರು. ‘ಪರಸ್ಪರ ಒಪ್ಪಿಗೆಯಾಗುವ ಸ್ಥಳದಲ್ಲಿ ಭೇಟಿಯಾಗೋಣ. ಯಾವುದೇ ಸ್ಪಷ್ಟೀಕರಣ ಬೇಕಿದ್ದಲ್ಲಿ ಬರಲಿ, ಕುಳಿತು ಮಾತಾಡೋಣ ಎಂದು ಕುಮಾರ್ ಬಯಸಿದ್ದರು’ ಎಂದು ಮಮತಾ ನುಡಿದರು.

ಆದರೆ ಸಿಬಿಐ ಅವರನ್ನು ಬಂಧಿಸಲು ಬಯಸಿತ್ತು ಎಂದು ಮಮತಾ ಆರೋಪಿಸಿದರು.

‘ಸಿಬಿಐ ಅಧಿಕಾರಿಗಳು ಯಾವುದೇ ನೋಟೀಸ್ ನೀಡದೆ ಭಾನುವಾರ ರಹಸ್ಯ ಕಾರ್ಯಾಚರಣೆ ಭಾಗವಾಗಿ ಅವರ ನಿವಾಸಕ್ಕೆ ತೆರಳಿ ಬಂಧಿಸಲು ಬಯಸಿದ್ದರು. ಆದರೆ ಈಗ ಕೋರ್ಟ್ ಅವರನ್ನು ಬಂಧಿಸಕೂಡದು ಎಂದು ಹೇಳಿದೆ. ನಾವು ಈ ಆದೇಶಕ್ಕೆ ಬದ್ಧರಾಗಿದ್ದೇವೆ. ಇದು ಅಧಿಕಾರಿಗಳ ನೈತಿಕ ಸ್ಥೈರ್ಯ ಬಲಪಡಿಸುತ್ತದೆ’ ಎಂದು ಮಮತಾ ಪ್ರತಿಪಾದಿಸಿದರು.

ಬಿಜೆಪಿ ಹೇಳಿದ್ದೇನು?
ಇನ್ನೊಂದೆಡೆ, ಬಿಜೆಪಿ ಕೂಡ ಈ ತೀರ್ಪು ಸಿಬಿಐಗೆ ಮಹತ್ವದ ವಿಜಯ ಎಂದು ಬಣ್ಣಿಸಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ‘ಪ್ರಾಮಾಣಿಕತೆ, ನ್ಯಾಯಪರತೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮಹತ್ವದ ಜಯ ದೊರೆತಿದೆ’ ಎಂದು ಬಣ್ಣಿಸಿದರು.

‘ಇಂದು ಸಿಬಿಐಗೆ ಬಹುದೊಡ್ಡ ನೈತಿಕ ವಿಜಯ ದೊರೆತಿದೆ. ಇಂದಿನ ತೀರ್ಪು ಮಹತ್ವದ್ದಾಗಿದ್ದು, ಆಳವಾದ ಪತಿಣಾಮ ಬೀರಲಿದೆ’ ಎಂದು ಪ್ರಸಾದ್ ನುಡಿದರು.

ಕೋಲ್ಕತಾ ಪೊಲೀಸ್ ಕಮಿಷನರ್ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲೇಬೇಕು. ಅಲ್ಲದೆ ಪಶ್ಚಿಮ ಬಂಗಾಳದ ಉನ್ನತಾಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಪ್ರಸಾದ್ ತಿಳಿಸಿದರು.

ಫೆಬ್ರವರಿ 18ರ ಮೊದಲು ನ್ಯಾಯಾಂಗ ನಿಂದನೆ ನೋಟೀಸಿಗೆ ಉತ್ತರಿಸುವಂತೆ ಪಶ್ಚಿಮ ಬಂಗಾಳದ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿರುವುದನ್ನು ಅವರು ಉಲ್ಲೇಖಿಸಿದರು.

ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಕುಮಾರ್ ಅವರು ಫೆಬ್ರವರಿ 20ರಂದು ಖುದ್ದಾಗಿ ಹಾಜರಾಗಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೋರ್ಟ್‌ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತಹ ಬಿಜೆಪಿ ನಾಯಕರಿಗೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿರುವುದು ಕಂಡು ಮಮತಾ ಬ್ಯಾನರ್ಜಿ ಆತಂಕಗೊಂಡಿದ್ದಾರೆ. ಹೀಗಾಗಿಯೇ ಬಿಜೆಪಿ ನಾಯಕರ ರ‍್ಯಾಲಿಗಳಿಗೆ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಸಾದ್ ನುಡಿದರು.

‘ಪ್ರಧಾನಿಯವರ ಸಾರ್ವಜನಿಕ ಸಭೆಗೆ ಸಣ್ಣ ಮೈದಾನವನ್ನೇ ಒದಗಿಸಿದ್ದು ಯಾಕೆ? ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರ ಸಮಾವೇಶಗಳಿಗೆ ಅನುಮತಿ ನಿರಾಕರಿಸುತ್ತಿರುವುದು ಏಕೆ?’ ಎಂದು ಪ್ರಸಾದ್ ಪ್ರಶ್ನಿಸಿದರು.

Summary
ದೇಶ : ಕೋಲ್ಕತಾ ಟಾಪ್ ಕಾಪ್‌ಗೆ ಸುಪ್ರೀಂ ಆದೇಶ !
Article Name
ದೇಶ : ಕೋಲ್ಕತಾ ಟಾಪ್ ಕಾಪ್‌ಗೆ ಸುಪ್ರೀಂ ಆದೇಶ !
Description
ಕೋಲ್ಕತಾ ಪೊಲೀಸ್ ಕಮಿಷನರ್ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲೇಬೇಕು. ಅಲ್ಲದೆ ಪಶ್ಚಿಮ ಬಂಗಾಳದ ಉನ್ನತಾಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಪ್ರಸಾದ್ ತಿಳಿಸಿದರು. 

LEAVE A REPLY

Please enter your comment!
Please enter your name here