ಧರ್ಮಸ್ಥಳ: ಧರ್ಮಸ್ಥಳ ಬಾಹುಬಲಿ ನಾಲ್ಕನೇ ಮಹಾಮಸ್ತಕಾಭಿಷೇಕ ಮಹೋತ್ಸವ, ಭಾನುವಾರ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಐವರು ಕ್ಷುಲ್ಲಕ ದೀಕ್ಷೆ ಸ್ವೀಕರಿಸುವ ಮೂಲಕ ಲೌಕಿಕ ಜೀವನ ತ್ಯಜಿಸಿ ಜೈನ ಸನ್ಯಾಸಿಗಳಾದರು.

ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿಮಹಾರಾಜರು, ಸತೀಶ್ ಜೀ ಭಯ್ಯಜಿ, ಪೂರನ್ ಭಯ್ಯಜಿ, ಪ್ರಭು ಭಯ್ಯಜಿ, ಸಂಯಮ ದೀದಿ ಹಾಗೂ ಸಮತಾ ದೀದಿ ಅವರಿಗೆ ಕ್ಷುಲ್ಲಕ ದೀಕ್ಷೆ ನೀಡಿದರು. ಬೆಳಗ್ಗೆ ಚಂದ್ರನಾಥ ಬಸದಿಯಿಂದ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ಈ ಐವರನ್ನು ಕರೆತರಲಾಯಿತು. ರಾಜ-ರಾಣಿ ಪೋಷಾಕು ಧರಿಸಿದ್ದ ಐವರು ರಜತ ರಥದಲ್ಲಿ ಮನೆಯರೊಂದಿಗೆ ಸಭಾಂಗಣಕ್ಕೆ ಆಗಮಿಸಿದರು.

ದೀಕ್ಷೆ ಹೇಗೆ?: ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿಮಹಾರಾಜ ದೀಕ್ಷೆ ನೀಡುವ ಮೊದಲು ಕೆಲವು ಪ್ರಶ್ನೆಗಳ ಮೂಲಕ ದೀಕ್ಷೆ ಪಡೆದುಕೊಳ್ಳುವ ಕಾರಣ ತಿಳಿದುಕೊಂಡರು. ಬಳಿಕ ಪ್ರಮುಖ ಹಂತ ಕೇಶಲೋಚನ (ತಲೆ ಕೂದಲು ಕೀಳುವುದು) ನಡೆಯಿತು. ಪುಷ್ಪದಂತ ಮಹಾರಾಜರು ಭಯ್ಯಜಿಯವರ ಹಾಗೂ ಜಿನವಾಣಿ ಮಾತಾಜಿ ದೀಕ್ಷೆ ಸ್ವೀಕರಿಸಲಿರುವ ದೀದಿಯವರ ಕೇಶಲೋಚನ ನಡೆಸಿದರು. ಮುಂದಿನ ಪ್ರಕ್ರಿಯೆಯಾಗಿ ಪೇಟ ಸಹಿತ ವಸ್ತ್ರ ತೆಗೆದು, ಬಿಳಿ ಕೌಪೀನ ಹಾಗೂ ಬಿಳಿ ಸೀರೆವಸ್ತ್ರಧಾರಿಗಳಾದರು. ಬಳಿಕ ತಲೆಗೆ ಕುಂಕುಮ, ಅಕ್ಷತೆ ಹಾಕುವ ಮೂಲಕ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆದವು. ಶ್ವೇತವಸ್ತ್ರ, ಪಿಂಛಿ (ನವಿಲುಗರಿ), ಕಮಂಡಲ ನೀಡಲಾಯಿತು. ಕೊನೆಯದಾಗಿ ನಾಮಕರಣ ಮಾಡಲಾಯಿತು.
ಬ್ರಹ್ಮಚಾರಿಗಳ ಕುಟುಂಬಸ್ಥರ ಜತೆಗೆ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್, ಡಾ.ಹೆಗ್ಗಡೆಯವರ ಪುತ್ರಿ ಶ್ರದ್ಧಾ-ಅಮಿತ್ ದಂಪತಿ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಸನ್ಯಾಸಕ್ಕೆ ಹೊಸ ನಾಮಕರಣ: ಸನ್ಯಾಸಿ ದೀಕ್ಷೆ ಪಡೆದ ಐವರಿಗೂ ನಾಮಕರಣ ಮಾಡಲಾಯಿತು. ಪುಷ್ಪದಂತ ಸಾಗರ ಮುನಿಮಹಾರಾಜ ಅವರು ಸತೀಶ್ ಜೀ ಭಯ್ಯಜಿ ಅವರಿಗೆ ಪರ್ವಸಾಗರ ಮಹಾರಾಜ್, ಪ್ರಭು ಭಯ್ಯಜಿಯವರಿಗೆ ಪ್ರಭಾಕರ್‌ಸಾಗರ್ ಮಹಾರಾಜ್, ಪೂರನ್ ಭಯ್ಯಜಿಯವರಿಗೆ ಪರಮಾತ್ಮಸಾಗರ್ ಮಹಾರಾಜ್ ಎಂದು ನಾಮಕರಣ ಮಾಡಿದರು. ಜಿನವಾಣಿ ಮಾತಾಜಿಯವರು ಸಂಯಮ ದೀದಿಗೆ ಅಮರಜ್ಯೋತಿ ಮಾತಾಜಿ ಹಾಗೂ ಸಮತಾ ದೀದಿಯವರಿಗೆ ಅಮೃತಜ್ಯೋತಿ ಮಾತಾಜಿ ಎಂದು ನಾಮಕರಣ ಮಾಡಿದರು.

ಪೂರ್ವಾಶ್ರಮ: ಸತೀಶ್ ಕುಮಾರ್ ಜೈನ್ (ಸತೀಶ್ ಭಯ್ಯಜಿ), 23 ವರ್ಷ. ಜನ್ಮಸ್ಥಳ; ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಪುಲರ್. ಮುನಿಶ್ರೀ ತರುಣ ಸಾಗರ್ ಮಹಾರಾಜರ ಜನ್ಮಸ್ಥಳ ಗಾವುಂಜಿ ಗ್ರಾಮದಿಂದ 10 ಕಿ.ಮೀ. ದೂರ. 14ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ 9 ವರ್ಷಗಳಿಂದ ತ್ಯಾಗ ಜೀವನ ನಡೆಸುತ್ತಿದ್ದಾರೆ. ಶಿವಂ ಕುಮಾರ್ ಜೈನ್ (ಪ್ರಭು ಭಯ್ಯಜಿ), 24 ವರ್ಷ, ಜನ್ಮ ಸ್ಥಳ ಉತ್ತರಪ್ರದೇಶದ ಇಟಾವಾ 2011ರಲ್ಲಿ ಬ್ರಹ್ಮಚಾರಿ ದೀಕ್ಷೆ. ಪೂರನ್‌ಮಾಲ್ ಜೈನ್(ಪೂರನ್ ಭಯ್ಯಜಿ) 74 ವರ್ಷ, ಜನ್ಮಸ್ಥಳ ಹೈದರಾಬಾದ್‌ನ ಮಾಟಿಕ ಶೇಟ್. 1972ರಲ್ಲಿ ಎಲ್ಎಲ್ಬಿ ಪದವಿ. 1975ರಲ್ಲಿ ವಿವಾಹವಾಗಿ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. 2017ರಲ್ಲಿ ಬ್ರಹ್ಮಚಾರಿ ದೀಕ್ಷೆ ಸ್ವೀಕಾರ. ಸಂಯಮ ದೀದಿ, 45 ವರ್ಷ, ಜನ್ಮಸ್ಥಳ ಬಳ್ಳಾರಿ ಜಿಲ್ಲೆ ಸಿರಿಕೊಳ, ತಂದೆ ರಾಜಣ್ಣ ತಾಯಿ ನಾಗಮ್ಮ. ಸಮತಾ ದೀದಿ, 81 ವರ್ಷ, ಜನ್ಮಸ್ಥಳ ಬೆಳಗಾವಿ ಜಿಲ್ಲೆ ಬುಡರಕಟ್ಟೆ. ತಂದೆ: ಅರ್ಜುನಪ್ಪ, ತಾಯಿ ರತ್ನಮ್ಮ.

54 ಕಲಶಗಳಿಂದ ಪಾದಾಭಿಷೇಕ: ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದ ಎರಡನೇ ದಿನ ಬಾಹುಬಲಿ ಬೆಟ್ಟದಲ್ಲಿ 54 ಕಲಶಗಳಿಂದ ಪಾದಾಭಿಷೇಕ ನೆರವೇರಿತು. ಪ್ರಾತಃಕಾಲ 8ಗಂಟೆಗೆ ನಿತ್ಯವಿಧಿ ಸಹಿತ ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ಹೋಮ, ದಿಕ್ಪಾಲಕ ಬಲಿ, ಯಜ್ಞ ಶಾಲೆಯಲ್ಲಿ ಯಕ್ಷಾರಾಧನೆ ಪೂರ್ವಕ ಯಕ್ಷ ಪ್ರತಿಷ್ಠಾಪನೆ, ಮಧ್ಯಾಹ್ನ 12.35ರ ಅಭಿಜಿನ್ ಲಗ್ನದಲ್ಲಿ ಧ್ವಜಾರೋಹಣ ನೆರವೇರಿತು. ಬಳಿಕ ಪಾದಾಭಿಷೇಕ ನಡೆಯಿತು. ಮಧ್ಯಾಹ್ನ 3ರಿಂದ ಶ್ರೀಪೀಠ ಯಂತ್ರಾರಾಧನೆ. ಸಾಯಂಕಾಲ ಭೇರಿತಾಡನ, ಧ್ವಜ ಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿ ನಡೆಯಿತು.

Summary
ಧರ್ಮಸ್ಥಳ : ಬಾಹುಬಲಿ ಸನ್ನಿಧಿಯಲ್ಲಿ ಕ್ಷುಲ್ಲಕ ದೀಕ್ಷೆ !
Article Name
ಧರ್ಮಸ್ಥಳ : ಬಾಹುಬಲಿ ಸನ್ನಿಧಿಯಲ್ಲಿ ಕ್ಷುಲ್ಲಕ ದೀಕ್ಷೆ !
Description
ಬಳಿಕ ಪಾದಾಭಿಷೇಕ ನಡೆಯಿತು. ಮಧ್ಯಾಹ್ನ 3ರಿಂದ ಶ್ರೀಪೀಠ ಯಂತ್ರಾರಾಧನೆ. ಸಾಯಂಕಾಲ ಭೇರಿತಾಡನ, ಧ್ವಜ ಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿ ನಡೆಯಿತು.

LEAVE A REPLY

Please enter your comment!
Please enter your name here