ಕೊಡಗು

ಸಮಾಜದ ಪ್ರಜ್ಞಾವಂತ ಪ್ರಜೆಗಳ ನಿಮಾತೃಗಳಾದ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಪೂರಕವಾದ ವಾತಾವರಣ ಕಲ್ಪಿಸಿಕೊಡುವ ಜವಾಬ್ದಾರಿ ಅತ್ಯಗತ್ಯವಾಗಿದ್ದು ಶಿಕ್ಷಕರ ಸಮಸ್ಯೆಗಳ ಈಡೇರಿಕೆಗೆ ಎಲ್ಲಾ ರೀತಿಯ ಶ್ರಮವಹಿಸಲಾಗುವುದು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೆಗೌಡ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಸ್ಥಳೀಯ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾಮಟ್ಟದ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ಕುರಿತಾದ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ವರ್ಗದವರು ಹಲವು ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಹೋರಾಟದ ಮೂಲಕ ತಮ್ಮ ಬೇಡಿಕೆಗಳ ಈಡೇರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿರುವುದು ವಿಪರ್ಯಾಸದ ಸಂಗತಿ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರ ಧ್ವನಿಯಾಗಿ ನಾನು ಕೂಡ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.


ಜನಪ್ರತಿನಿಧಿಗಳ ಗೌರವ ಧನ ಏಕಾಏಕಿ ಏರಿಕೆಯಾದರೂ ಯಾರೂ ಕೂಡ ಚಕಾರವೆತ್ತುವುದಿಲ್ಲ, ಅದರ ಬಗ್ಗೆ ಚರ್ಚಿಸುವುದಿಲ್ಲ. ಆದರೆ ಶಿಕ್ಷಕರ ವೇತನ ಪರಿಷ್ಕರಣೆ ವಿಷಯ ಸಂಬಂಧ ಗೊಂದಲಗಳು ಮೂಡುತ್ತಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ಶಿಕ್ಷಕರ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದೆ. ಐಎಎಸ್ ಅಧಿಕಾರಿಗಳು ಸರಕಾರದ ಸುತ್ತೊಲೆಗಳನ್ನು ಕಾಯ್ದೆಗಳಾಗಿ ರೂಪಿಸುವ ಅಧಿಕಾರ ಸಾಂವಿಧಾನಿಕವಾಗಿ ಹೊಂದಿಲ್ಲ ಎಂದರು.
ಶಿಕ್ಷಕರ ಬೇಡಿಕೆಗಳನ್ನು ಮನ್ನಣೆ ಮಾಡಿ ಅವರಿಗೆ ಕಾಣಿಕೆ ನೀಡುವ ಜವಾಬ್ದಾರಿ ನಮ್ಮದಾಗಿದ್ದು ಆರೋಗ್ಯ ಸೌಲಭ್ಯ ಒದಗಿಸುವ ಸಂಬಂಧ ಸರಕಾರದ ಗಮನ ಸೆಳೆಯಲಾಗುವುದು. ಸರಕಾರ ಮತ್ತು ಇಲಾಖೆ ಕೂಡ ಶಿಕ್ಷಕರ ಆದ್ಯತೆ ಮೇರೆಗೆ ವರ್ಗಾವಣೆ ಪ್ರಕ್ರಿಯೆ ನಡೆಸಬೇಕಿದೆ. ವರ್ಗಾವಣೆ ಪ್ರಕ್ರಿಯೆ ಸರಕಾರದ ಸಹಜ ಪ್ರಕ್ರಿಯೆಯಾಗಿದ್ದು ಇದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕಿದೆ. ಒಪ್ಪಿತ, ಪರಸ್ಪರ ವರ್ಗಾವಣೆಗಳಿಗೆ ಆದ್ಯತೆ ನೀಡಬೇಕಿದೆ. ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ಬದಲಾಗಬೇಕಿದೆ. ೭೫ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಬದಲಾಗಿ ೫೦:೧ ಕ್ರಮಕ್ಕೆ ಇಲಾಖೆ ಮುಂದಾಗಬೇಕಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಡೆತಡೆಗಳನ್ನು ಎದುರಿಸುವ ಮುನ್ನಡೆಯುವ ಮನಸ್ಥಿತಿ ಉಂಟುಮಾಡಬೇಕಿದೆ. ಸದಾ ಪೋಷಕರಿಗೆ ಅವಲಂಬಿತರಾಗುವುದು ತಪ್ಪಿಸಬೇಕಿದೆ. ಪ್ರಪಂಚ ಜ್ಞಾನ ಅರಿಯಲು ವಿವಿಧ ಭಾಷೆಗಳ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಕಲಿಕೆ ಸಂಬಂಧ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕನ್ನಡ ಭಾಷೆಯ ಅಭಿಮಾನಿಗಳಬೇಕೆ ಹೊರತು ದುರಭಿಮಾನಿಗಳಾಗಬಾರದು. ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕ್ಷೆÃತ್ರಗಳಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯ ಆಧಿಪತ್ಯ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದರೊಂದಿಗೆ ಇತರೆ ಭಾಷೆಗಳನ್ನು ಕೂಡ ಪ್ರೀತಿಸಿ ತಮ್ಮ ಮಕ್ಕಳಿಗೆ ಕಲಿಸಿದಲ್ಲಿ ಹೆಚ್ಚಿನ ಅನುಕೂಲ ಉಮಟಾಗಲಿದೆ ಎಂದು ಅವರು ಹೇಳಿದರು.


ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಕೆ.ಮಂಜುನಾಥ್ ಮಾತನಾಡಿ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ವಿಚಾರವಾಗಿದೆ. ಮಕ್ಕಳನ್ನು ಹುರಿದುಂಬಿಸುವ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದನೆ ದೊರಕದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಪ್ರಗತಿದಾಯಕ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ಕೆಲಸಗಳಿಗೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಬೇಕಿದೆ ಎಂದು ಅವರು ಸರಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳಾಡಿ, ಶಿಕ್ಷಕರು ಸಂಘಟಿತರಾಗಿ ಕಾರ್ಯನಿರ್ವಹಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ಕೂಡ ಮಹತ್ತರವಾಗಿದ್ದು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದರು.
ಜಿಲ್ಲೆಯ ಪ್ರಕೃತಿ ವಿಕೋಪ ಘಟನೆಗೆ ಸ್ಪಂದಿಸಿ ಜಿಲ್ಲಾ ಘಟಕ ರಾಜ್ಯ ಘಟಕದೊಂದಿಗೆ ಕೈಜೋಡಿಸಿ ಶಿಕ್ಷಕರ ಒಂದು ದಿನದ ವೇತನವನ್ನು ಸಂತ್ರಸ್ಥರಿಗೆ ನೀಡುವ ನಿರ್ಣಯದಂತೆ ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ನೀಡುವ ಸಂಬಂಧ ಸಂಗ್ರಹ ಮೊತ್ತದ ಚೆಕ್ ಹಸ್ತಾಂತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕರ ಸಮಸ್ಯೆಗಳನ್ನು ನಿವಾರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿ ಎನ್.ಪ್ರಭಾ ಉಪನ್ಯಾಸ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಂ.ರಂಗಸ್ವಾಮಿ, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರುಗಳಾದ ಪಿ.ಎಸ್.ಮಚ್ಚಡೋ, ವಾಲ್ಟರ್ ಡಿ. ಮೆಲ್ಲೊ ಕೊಡಗು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ರವಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್ ವಾಸ್, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ನಾಗರಾಜಯ್ಯ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಗಾಯತ್ರಿ, ಕೊಡಗು ಜಿಲ್ಲಾ ವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ಜಿಮ್ಮಿ ಸಿಕ್ವೆರಾ, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮತ್ತಿತರರು ಇದ್ದರು.
ಸಂಘಟದ ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ.ಕುಮಾರ್ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ದಯಾನಂದ್ ವಂದಿಸಿದರು.

:

LEAVE A REPLY

Please enter your comment!
Please enter your name here