ಬೆಂಗಳೂರು, ನ.9- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕುಟುಂಬ ಸದಸ್ಯರೊಂದಿಗೆ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಮೈಸೂರು ಜಿಲ್ಲೆಯ ಖಾಸಗಿ ಸ್ಥಳದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವುದರಿಂದ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಉಪ ಚುನಾವಣೆ ಪ್ರಚಾರದ ನಂತರ ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿಗೆ ವೈದ್ಯರು ಸಲಹೆ ಮಾಡಿದ್ದರು. ಅದರಂತೆ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಳೆ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿಯಲ್ಲೂ ಕೂಡ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿಲ್ಲ. ಕಳೆದ ಮೂರು ದಿನಗಳಿಂದಲೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಮುಖ್ಯಮಂತ್ರಿ ತೊಡಗಿಸಿಕೊಂಡಿರಲಿಲ್ಲ. ಸರ್ಕಾರಿ ರಜೆ ಇದ್ದುದ್ದರಿಂದ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿರಲಿಲ್ಲ.

ಇಂದು ಮೈಸೂರು ಜಿಲ್ಲೆಗೆ ತೆರಳಿರುವ ಮುಖ್ಯಮಂತ್ರಿಯವರು ಭಾನುವಾರ ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರೊಂದಿಗೆ ಶಾಸಕಿ ಹಾಗೂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಮೂರು ದಿನಗಳ ಕಾಲ ಸಿಎಂ ಜತೆ ಇರಲಿದ್ದಾರೆ.

# ಟಿಪ್ಪು ಜಯಂತಿಯಿಂದ ದೂರ :
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕುರಿತ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿಯುವ ಸಾಧ್ಯತೆ ಇದೆ. ನಾಳೆ (ನ.10)ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೆಸರು ಪ್ರಕಟಿಸಲಾಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಹ್ವಾನ ಪತ್ರಿಕೆ ಬಿಡುಗಡೆಯಾಗಿದ್ದು, ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಉದ್ಘಾಟಿಸಲಿದ್ದಾರೆ. ಇದುವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ, ಕುಮಾರಸ್ವಾಮಿ ಅವರು ಈ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹಾಗೆ ನೋಡಿದರೆ ಕುಮಾರಸ್ವಾಮಿ ಅವರ ಶನಿವಾರದ ಬೇರೆ ಯಾವುದೇ ಕಾರ್ಯಕ್ರಮ ಇದುವರೆಗೆ ನಿಗದಿಯಾಗಿಲ್ಲ. ಶುಕ್ರವಾರ ಮತ್ತು ಶನಿವಾರ ಎರಡೂ ದಿನಗಳ ಕಾಲ ಮುಖ್ಯಮಂತ್ರಿಗಳು ಬೆಂಗಳೂರಿನ ಹೊರತುಪಡಿಸಿ ಬೇರೊಂದು ಸ್ಥಳದಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here