ಕುಂದಾಪುರ: ಕಿರಿಮಂಜೇಶ್ವರ ಸಮೀಪದ ನಾಗೂರು ಜಾಮಿಯಾ ಮಸೀದಿಯ ಆವರಣದಲ್ಲಿ ಹಂದಿಯ ಕಿವಿ ಹಾಗೂ ಕಾಲಿನ ಭಾಗವನ್ನು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರು ಉಪ್ಪುಂದ ರವಿಚಂದ್ರ, ಈತನ ತಂದೆ ನಾಗರಾಜ್‌, ತೊಂಡೆಮಕ್ಕಿಯ ನವೀನ್‌ ಖಾರ್ವಿ, ಅಮ್ಮನವರ ತೊಪ್ಲುವಿನ ಶ್ರೀಧರ ಖಾರ್ವಿ ಹಾಗೂ ರಾಘವೇಂದ್ರ ಖಾರ್ವಿ ಎಂದು ಗುರುತಿಸಲಾಗಿದೆ. ಜ.14ರಂದು ರಾತ್ರಿ 10.55ರ ಸುಮಾರಿಗೆ ಬೈಕ್‌ನಲ್ಲಿ ಆಗಮಿಸಿ ಮಸೀದಿಯ ಆವರಣಕ್ಕೆ ಹಂದಿ ಮಾಂಸ ಎಸೆದು ಪರಾರಿಯಾಗಿದ್ದರು. ಜ.15ರಂದು ಬೆಳಗ್ಗೆ 5.30ರ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿತ್ತು. ಮಸೀದಿಗೆ ಅಳವಡಿಸಿದ ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿತ್ತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್‌ಕುಮಾರ್‌, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ, ಬೈಂದೂರು ಪಿಎಸ್‌ಐ ತಿಮ್ಮೇಶ್‌ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಪ್ರಕರಣ ಭೇದಿಸಿ ಸಂಚಿನಲ್ಲಿ ಪಾಲ್ಗೊಂಡ ಐವರನ್ನು ಭಾನುವಾರ ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಪ್ಪುಂದ ರವಿಚಂದ್ರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಪರಿಸರದಲ್ಲಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಂತೋಷಕುಮಾರ್‌, ಸಂತೋಷ್‌ ಖಾರ್ವಿ, ಶ್ರೀಧರ, ನಾಗರಾಜ್‌ ಖಾರ್ವಿ, ಪ್ರಿನ್ಸ್‌ ಶಿರೂರು, ರಮೇಶ್‌ ಕುಲಾಲ್‌, ಕೃಷ್ಣ ದೇವಾಡಿಗ, ಮೋಹನ್‌ ಪೂಜಾರಿ, ಚಂದ್ರಶೇಖರ್‌, ನಾಗೇಂದ್ರ, ತಾಂತ್ರಿಕ ವಿಭಾಗದ ಶಿವಾನಂದ ಪಾಲ್ಗೊಂಡಿದ್ದರು.

ಪ್ರಕರಣ ಭೇದಿಸಿದ ಪೊಲೀಸ್‌ ತಂಡಕ್ಕೆ ಎಸ್ಪಿ ಲಕ್ಷ್ಮಣ ನಿಂಬರ್ಗಿ 10 ಸಾವಿರ ರೂ.ನಗದು ಬಹುಮಾನ ಘೋಷಿಸಿದ್ದಾರೆ.

Summary
ಬೈಂದೂರು ಪೊಲೀಸರಿಂದ ಐವರು ಆರೋಪಿಗಳ ಬಂಧನ
Article Name
ಬೈಂದೂರು ಪೊಲೀಸರಿಂದ ಐವರು ಆರೋಪಿಗಳ ಬಂಧನ
Description
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸಂತೋಷಕುಮಾರ್‌, ಸಂತೋಷ್‌ ಖಾರ್ವಿ, ಶ್ರೀಧರ, ನಾಗರಾಜ್‌ ಖಾರ್ವಿ, ಪ್ರಿನ್ಸ್‌ ಶಿರೂರು, ರಮೇಶ್‌ ಕುಲಾಲ್‌, ಕೃಷ್ಣ ದೇವಾಡಿಗ, ಮೋಹನ್‌ ಪೂಜಾರಿ, ಚಂದ್ರಶೇಖರ್‌, ನಾಗೇಂದ್ರ, ತಾಂತ್ರಿಕ ವಿಭಾಗದ ಶಿವಾನಂದ ಪಾಲ್ಗೊಂಡಿದ್ದರು. 

LEAVE A REPLY

Please enter your comment!
Please enter your name here