ಚಾಮರಾಜನಗರ: ಈ ಬಾರಿ ಸುರಿದ ಮುಂಗಾರು ಮತ್ತು ಹಿಂಗಾರು ಮಳೆಗೆ ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಸಿರಿನಿಂದ ನಳನಳಿಸುತ್ತಿದೆ. ಜತೆಗೆ ಕೆರೆ ಕಟ್ಟೆಗಳು ನೀರಿನಿಂದ ತುಂಬಿರುವುದರಿಂದ ಕಾಡು ಪ್ರಾಣಿಗಳು ನೆಮ್ಮದಿಯಾಗಿ ರಾಜಾರೋಷವಾಗಿ ಅಡ್ಡಾಡುತ್ತಿವೆ. ಇವುಗಳ ದರ್ಶನದಿಂದ ಪ್ರವಾಸಿಗರು, ಪ್ರಾಣಿಪ್ರಿಯರು ಸಂತಸಗೊಂಡಿದ್ದಾರೆ. ಆದರೆ ಮುಂಬರುವ ದಿನಗಳು ಬೇಸಿಗೆಯ ಕಾಲವಾಗಿರುವುದರಿಂದ ಗಿಡಮರಗಳ ಎಲೆಗಳು ಉದುರಲಿವೆ, ಹುಲ್ಲು, ಗಿಡ, ಗಂಟಿಗಳು ಒಣಗಲಿದ್ದು ಹೀಗಾಗಿ ಅರಣ್ಯಕ್ಕೆ ಕಾಡ್ಗಿಚ್ಚು ಹರಡುವ ಭಯ ಇದ್ದೇ ಇರುತ್ತದೆ. ಹೀಗಾಗಿ ಈಗಿನಿಂದಲೇ ಮುಂದಿನ ಬೇಸಿಗೆಯಲ್ಲಿ ಸಂಭವಿಸಬಹುದಾದ ಕಾಡ್ಗಿಚ್ಚನ್ನು ತಡೆಯಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.

ಪ್ರತಿವರ್ಷವೂ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಎಲ್ಲ ವಲಯಗಳಲ್ಲಿಯೂ ಹಲವು ರೀತಿಯಲ್ಲಿ ಕಾಡ್ಗಿಚ್ಚು ನಡೆಯದಂತೆ ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಕೆಲವೊಮ್ಮೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ ನಿದರ್ಶನಗಳನ್ನು ನಾವು ಕಾಣಬಹುದಾಗಿದೆ. ಈಗಾಗಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಉದ್ಯಾನದ ಎಲ್ಲ 13 ಅರಣ್ಯ ವಲಯಗಳಲ್ಲೂ ಫೈರ್‌ಲೈನ್ ನಿರ್ಮಾಣ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ.

ಮೇಲುಕಾಮನಹಳ್ಳಿ ಬಳಿಯಿಂದ ಕೆಕ್ಕನಹಳ್ಳ, ಮದ್ದೂರಿನಿಂದ ಮೂಲೆಹೊಳೆವರೆಗಿನ ರಸ್ತೆ ಬದಿಯಲ್ಲಿನ ಒಣ ಹುಲ್ಲು ಹಾಗೂ ಬಳ್ಳಿಗಳನ್ನು ಸುಡುವ ಕಾರ್ಯ ಭರದಿಂದ ಸಾಗಿದೆ.

ಬೆಂಕಿ ರೇಖೆ (ಫೈರ್‌ಲೈನ್) ಮೊದಲಿಗೆ ಲಂಟಾನ ಹಾಗೂ ಕಳೆಗಿಡಗಳನ್ನು ತೆರವುಗೊಳಿಸಲಾಗಿದ್ದು, ಕಾಡಿನೊಳಗೆ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟಲು ಬೆಂಕಿ ರೇಖೆ (ಫೈರ್‌ಲೈನ್) ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರತಿ ಸಿಬ್ಬಂದಿಯೂ 5 ಲೀಟರಿನ ನೀರಿನ ಕ್ಯಾನ್ ನೊಂದಿಗೆ ತೆರಳುತ್ತಿದ್ದು, ಕೈನಲ್ಲಿ ಹಸಿರು ಸೊಪ್ಪು, ಬಳ್ಳಿಯೊಂದಿಗೆ ತೆರಳುತ್ತಿದ್ದು, ಜನ, ವಾಹನ ಸಂಚಾರವಿರುವ ಅರಣ್ಯದ ಬದಿಯಲ್ಲಿ ನಿರ್ಧಿಷ್ಟ ರೇಖೆಯನ್ನು ಮಾಡಿ ಅದರೊಳಗೆ ಇರುವ ಒಣ ಕಸ ಎಲೆ, ಹುಲ್ಲನ್ನು ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಬೆಂಕಿ ಇತರೆ ಪ್ರದೇಶಗಳಿಗೆ ಹರಡದಂತೆ ಸಿಬ್ಬಂದಿ ನೀರು ಮತ್ತು ಸೊಪ್ಪನ್ನು ಬಳಸಿ ಆರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ನೀರನ್ನು ಶೇಖರಿಸಿಟ್ಟುಕೊಳ್ಳುವ ಕಾರ್ಯ ಬೆಂಕಿರೇಖೆಯ ಕಾರ್ಯಕ್ಕೆ ಟ್ಯಾಂಕರ್ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ನೀರನ್ನು ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ. ಜತೆಗೆ ಈ ಕಾರ್ಯಕ್ಕೆ ಸ್ವಯಂಸೇವಾ ಸಂಸ್ಥೆಗಳು ನೀಡಲಾದ ಬೆಂಕಿ ನಂದಿಸುವ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದ್ದು, ಟ್ರ್ಯಾಕ್ಟರ್ ಗಳಿಗೆ ಟ್ಯಾಂಕರ್ ಅಳವಡಿಸಿ ನೀರನ್ನು ಶೇಖರಿಸಿಟ್ಟುಕೊಳ್ಳುವ ಕಾರ್ಯ ಮಾಡಲಾಗಿದೆ. ಬಂಡೀಪುರ ಅರಣ್ಯದಲ್ಲಿ ಹರಡಿ ಬೆಳೆದಿರುವ ಲಂಟಾನ ಎಂಬ ಸಸ್ಯ ಬೇಸಿಗೆ ಕಾಲದಲ್ಲಿ ಒಣಗುವುದರಿಂದ ಕಾಡ್ಗಿಚ್ಚು ಸಂಭವಿಸಿದ ವೇಳೆ ಬೆಂಕಿ ಹರಡಿ ಉರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ಈ ಲಂಟಾನ ಸಸ್ಯದಿಂದ ಇತರೆ ಗಿಡಮರಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಈ ಸಸ್ಯವನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಗಿದೆ. ಇದು ಕೂಡ ಕಾಡ್ಗಿಚ್ಚು ತಡೆಗೆ ಅನುಕೂಲವಾಗಿದೆ ಎಂದರೂ ತಪ್ಪಾಗಲಾರದು.

ಭಾರೀ ಅನಾಹುತಗಳಾಗಿವೆ ಹಾಗೆ ನೋಡಿದರೆ ಬಂಡೀಪುರ ಅರಣ್ಯದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಭಾರೀ ಅನಾಹುತಗಳಾಗಿವೆ. 2014ರ ಮಾರ್ಚ್‌ನಲ್ಲಿ ಬಂಡೀಪುರಕ್ಕೆ ಹಾಗೂ 2017ರ ಫೆ 18ರಂದು ಕಲ್ಕೆರೆಗೆ ಆಕಸ್ಮಿಕವಾಗಿ ಬಿದ್ದ ಬೆಂಕಿಯು ನಿಯಂತ್ರಣಕ್ಕೆ ಬಾರದೆ ಸಾವಿರಾರು ಎಕರೆಗೂ ಹೆಚ್ಚು ಅರಣ್ಯ ಹೊತ್ತಿ ಉರಿದಿದ್ದರಿಂದ ಮರಮಟ್ಟುಗಳು, ಸಣ್ಣಪುಟ್ಟ ಪ್ರಾಣಿಗಳು ಸೇರಿದಂತೆ ಅಪಾರವಾದ ವನ್ಯಸಂಪತ್ತು ನಾಶವಾಗಿತ್ತು. 2017ರಲ್ಲಿ ಸಂಭವಿಸಿದ ದುರಂತದಲ್ಲಿ ಮುರುಗೆಪ್ಪ ಎಂಬ ಗಾರ್ಡ್ ಸಜೀವ ದಹನವಾಗಿದ್ದು, ಇಬ್ಬರು ವಾಚರ್ ಗಳು, ಒಬ್ಬರು ಆರ್‌ಎಫ್‌ಒ ತೀವ್ರ ಗಾಯಗೊಂಡಿದ್ದರು. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಹಿಸುತ್ತಿದೆ.

ಅರಣ್ಯ ರಕ್ಷಣೆಯತ್ತ ಗಮನಹರಿಸಲಿ ಈ ಕುರಿತಂತೆ ಮಾತನಾಡಿರುವ ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ನಟರಾಜು ಅವರು ಬಂಡೀಪುರ ಉದ್ಯಾನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಈಗಾಗಲೇ ಒಣಗಿದ್ದ ಲಂಟಾನ ತೆರವುಗೊಳಿಸಿ ಫೈರ್ ಲೈನ್ ಮಾಡಲಾಗಿದೆ ಜತೆಗೆ ಅರಣ್ಯ ನಾಶದಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಾರ್ವಜನಿಕರ ಸಹಕಾರವನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅರಣ್ಯಕ್ಕೆ ಕಾಡ್ಗಿಚ್ಚು ಹರಡುವ ಕುರಿತಂತೆ ಕೇವಲ ಅರಣ್ಯ ಇಲಾಖೆ ಮಾತ್ರ ಜವಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರು ಇದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಅರಣ್ಯಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವಂತಹ ದುಷ್ಕರ್ಮಿಗಳಿದ್ದು ಅಂತಹವರ ಬಗ್ಗೆಯೂ ನಿಗಾವಹಿಸಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬ ನಾಗರಿಕ ಅರಣ್ಯ ರಕ್ಷಣೆಯತ್ತ ಗಮನವಹಿಸಿದ್ದೇ ಆದರೆ ಖಂಡಿತಾ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಕಷ್ಟವಾಗಲಾರದು.

Summary
ಬೇಸಿಗೆಯ ಕಾಡ್ಗಿಚ್ಚು ತಡೆಯಲು ಮುಂದಾದ ಅಧಿಕಾರಿಗಳು!!
Article Name
ಬೇಸಿಗೆಯ ಕಾಡ್ಗಿಚ್ಚು ತಡೆಯಲು ಮುಂದಾದ ಅಧಿಕಾರಿಗಳು!!
Description
ಅರಣ್ಯ ರಕ್ಷಣೆಯತ್ತ ಗಮನಹರಿಸಲಿ ಈ ಕುರಿತಂತೆ ಮಾತನಾಡಿರುವ ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ನಟರಾಜು ಅವರು ಬಂಡೀಪುರ ಉದ್ಯಾನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಈಗಾಗಲೇ ಒಣಗಿದ್ದ ಲಂಟಾನ ತೆರವುಗೊಳಿಸಿ ಫೈರ್ ಲೈನ್ ಮಾಡಲಾಗಿದೆ ಜತೆಗೆ ಅರಣ್ಯ ನಾಶದಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಾರ್ವಜನಿಕರ ಸಹಕಾರವನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅರಣ್ಯಕ್ಕೆ ಕಾಡ್ಗಿಚ್ಚು ಹರಡುವ ಕುರಿತಂತೆ ಕೇವಲ ಅರಣ್ಯ ಇಲಾಖೆ ಮಾತ್ರ ಜವಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರು ಇದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಅರಣ್ಯಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವಂತಹ ದುಷ್ಕರ್ಮಿಗಳಿದ್ದು ಅಂತಹವರ ಬಗ್ಗೆಯೂ ನಿಗಾವಹಿಸಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬ ನಾಗರಿಕ ಅರಣ್ಯ ರಕ್ಷಣೆಯತ್ತ ಗಮನವಹಿಸಿದ್ದೇ ಆದರೆ ಖಂಡಿತಾ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಕಷ್ಟವಾಗಲಾರದು.

LEAVE A REPLY

Please enter your comment!
Please enter your name here