ಮಂಗಳೂರು

ಡಿಸೆಂಬರ್ 07: ಬಿಹಾರ್, ಉತ್ತರಪ್ರದೇಶದಲ್ಲಿ ನಡೆಯುತ್ತಿದ್ದ ಅಪಹರಣ ಪ್ರಕರಣಗಳು ಈಗ ಮಂಗಳೂರಿನಲ್ಲೂ ನಡೆಯಲು ಆರಂಭಿಸಿವೆ. ವಿದ್ಯಾರ್ಥಿಯೋರ್ವನನ್ನು ಅಪಹರಿಸಿ ಹಲ್ಲೆ ನಡೆಸಿದ ಯುವಕರ ತಂಡ ನಂತರ ವಿದ್ಯಾರ್ಥಿಯ ಮನೆಯವರ ಬಳಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಿಬಿಎಂ ವಿದ್ಯಾರ್ಥಿ, ಫಳ್ನೀರ್ ನಿವಾಸಿ ಶಿಮಾಕ್ ಹಸನ್(22) ನನ್ನು 5 ಮಂದಿ ಯುವಕರ ತಂಡ ಸಿನಿಮೀಯ ರೀತಿಯಲ್ಲಿ ಅಪಹರಿಸಿತ್ತು.

ತುಂಬಾ ಹೊತ್ತಾದ ಬಳಿಕವೂ ಶಿಮಾಕ್ ವಾಪಸ್ಸಾಗದ ಕಾರಣ ಸ್ನೇಹಿತರು ಶಿಮಾಕ್ ಮೊಬೈಲ್‌ ಗೆ ಕರೆ ಮಾಡಿದ್ದಾರೆ. ಮೊದಲು ಯಾರೂ ಕರೆಯನ್ನು ಸ್ವೀಕರಿಸಿಲ್ಲ. ಬಳಿಕ ಮತ್ತೊಂದು ಬಾರಿ ಕರೆ ಮಾಡಿದಾಗ ದುಷ್ಕರ್ಮಿಗಳು ಕರೆ ಸ್ವೀಕರಿಸಿ “ಶಿಮಾಕ್ ನನ್ನು ಮೂಡುಬಿದಿರೆಗೆ ಕರೆದೊಯ್ಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

“ಶಿಮಾಕ್ ನನ್ನು ಬಿಡಬೇಕಾದರೆ 50 ಸಾವಿರ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಶಿಮಾಕ್ ನನ್ನು ಬಿಡುವುದಿಲ್ಲ” ಎಂದು ಬೆದರಿಕೆ ಒಡ್ಡಿದ್ದಾರೆ. ನಂತರ ಮತ್ತೆ ಕರೆ ಮಾಡಿ ಆತನನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ಆಗ ಕುಟುಂಬಸ್ಥರು 20 ಸಾವಿರ ರೂಪಾಯಿ ಕೊಡಲು ಒಪ್ಪಿದ್ದಾರೆ. ನಗರದ ಕೆಪಿಟಿ ಬಳಿ ದುಷ್ಕರ್ಮಿಗಳಿಗೆ ಬೇಡಿಕೆಯ ಹಣ ತಲುಪಿಸಿದ ತಕ್ಷಣ, ಶಿಮಾಕ್ ನನ್ನು ಸ್ವಿಫ್ಟ್ ಕಾರಿನಲ್ಲಿ ತಂದು ರಸ್ತೆಗೆ ತಳ್ಳಿ ಪರಾರಿಯಾಗಿದ್ದಾರೆ.

ಶಿಮಾಕ್ ನನ್ನು ಅಪಹರಿಸಿ ಹಲ್ಲೆ ನಡೆಸಿದವರು ಗೌತಮ್ , ಲಾಯ್ ವೇಗಸ್ , ಅಂಕಿತ್ , ಆದಿತ್ಯ ವಾಲ್ಕೆ ಎಂದು ಗುರುತಿಸಲಾಗಿದ್ದು ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪಿನಲ್ಲಿದ್ದ ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಪಹರಣಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಅದರಲ್ಲಿದ್ದ ಕಬ್ಬಿಣದ ರಾಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here