ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಅನೇಕ ಮಂದಿ ಅದನ್ನು ಮುಚ್ಚಿಡುವುದೇ ಹೆಚ್ಚು. ಹೊರಗೆ ಹೇಳಿಕೊಂಡರೆ ಜನ ಎಲ್ಲಿ ನಕ್ಕುಬಿಡುತ್ತಾರೊ ಎಂಬ ಭಯ ಮತ್ತು ಸಂಕೋಚ. ಹಲವು ಸಂದರ್ಭಗಳಲ್ಲಿ ಅದಕ್ಕೆ ಚಿಕಿತ್ಸೆ ಪಡೆಯಲು ಕೂಡ ಹೋಗುವುದಿಲ್ಲ.
ದೀಪಿಕಾ ಪಡುಕೋಣೆಯಂತಹ ಸೆಲೆಬ್ರಿಟಿಗಳು ಕೆಲವರು ಈ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಡೆಗಣಿಸಲ್ಪಡುವವರು ಮಕ್ಕಳು. ಖಿನ್ನತೆ ಮತ್ತು ಆ ಖಿನ್ನತೆಯಿಂದುಂಟಾಗುವ ಅಸ್ವಸ್ಥತೆ, ಪದೇ ಪದೇ ಖಿನ್ನತೆ ಮರುಕಳಿಸುವುದು, ಬೌದ್ಧಿಕ ಅಸಾಮರ್ಥ್ಯ, ಮಕ್ಕಳ ಸಂವಹನ ಮತ್ತು ವರ್ತನೆ ಮೇಲೆ ಪರಿಣಾಮ ಬೀರುವ ಆಟಿಸಂ, ಆತಂಕ, ಭಯ ಮತ್ತು ಮನೋವಿಕೃತ ಅಸ್ವಸ್ಥತೆಯಿಂದ ಮಕ್ಕಳು ಬಳಲುತ್ತಿರುತ್ತಾರೆ.
ಆದರೆ ಇದನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ಪೋಷಕರು ಕಡಿಮೆ. ಮಕ್ಕಳ ಜೀವನದಲ್ಲಿ 10ರಿಂದ 17 ವರ್ಷ ಅತ್ಯಂತ ಮುಖ್ಯ ಘಟ್ಟ, ಪ್ರಾಥಮಿಕ ಹಂತದಿಂದ ಪ್ರೌಢ ಹಂತದ ವಯಸ್ಸಿಗೆ ಮಕ್ಕಳು ಕಾಲಿಟ್ಟಾಗ ಅವರ ಶರೀರ ಮತ್ತು ಮನಸ್ಸಿನಲ್ಲಿ ಹಲವು ಏರುಪೇರುಗಳು, ಬದಲಾವಣೆಗಳಾಗುತ್ತವೆ. ಈ ವಯಸ್ಸಿನಲ್ಲಿ ಪೋಷಕರು ಮಕ್ಕಳ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಸಹ ಗಮನ ಹರಿಸಬೇಕಾಗುತ್ತದೆ.
ಮಕ್ಕಳಲ್ಲಿ ಮಾನಸಿಕ ಅನಾರೋಗ್ಯ ಗುರುತಿಸುವುದು:
ಯೋಚನೆಯಲ್ಲಿ ಬದಲಾವಣೆ: ನಿಮ್ಮ ಮಕ್ಕಳು ಯೋಚಿಸುವ ವಿಧಾನದಲ್ಲಿ ಬದಲಾವಣೆಯಾಗುತ್ತಿದೆ ಎಂದು ಗೊತ್ತಾದರೆ ಅದು ಅಸ್ವಸ್ಥತೆ, ಅನಾರೋಗ್ಯ ಎಂದರ್ಥ. ಶಾಲೆಯಲ್ಲಿ ಮಕ್ಕಳು ಕಲಿಕೆ, ಸಾಧನೆಯಲ್ಲಿ ಹಿಂದೆ ಬಿದ್ದರೆ ತಮ್ಮನ್ನು ತಾವೇ ಟೀಕಿಸುತ್ತಿದ್ದರೆ, ಋಣಾತ್ಮಕ ಯೋಚನೆಗಳು, ತಮ್ಮನ್ನು ತಾವು ಕೀಳು ಎಂದು ಭಾವಿಸಿಕೊಳ್ಳುವುದು ಇವೆಲ್ಲ ಮಾನಸಿಕ ಅನಾರೋಗ್ಯದ ಸೂಚನೆಗಳು.
ವರ್ತನೆಯಲ್ಲಿ ಬದಲಾವಣೆ: ಮಕ್ಕಳ ಯೋಚನೆಯಲ್ಲಿ ಬದಲಾವಣೆಯಾದರೆ ಅವರ ವರ್ತನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಮಕ್ಕಳಿಂದ ಹೇಗೆ ಬರುತ್ತದೆ ಎಂದು ಗಮನಿಸುತ್ತಿರಬೇಕು. ಒಂಟಿಯಾಗಿ ಕುಳಿತುಕೊಳ್ಳುವುದು, ಸಣ್ಣಪುಟ್ಟ ವಿಷಯಗಳಿಗೆ ಅಳುವುದು, ಸಿಟ್ಟು ಮಾಡಿಕೊಳ್ಳುವುದು, ಚಟುವಟಿಕೆಗಳಲ್ಲಿ, ತಿನ್ನುವುದರಲ್ಲಿ, ಆಟ ಪಾಠಗಳಲ್ಲಿ ನಿರಾಸಕ್ತಿ ಕಂಡುಬಂದರೆ, ನಿದ್ದೆ ಸರಿ ಮಾಡದಿದ್ದರೆ ಅದು ಮಾನಸಿಕ ಕಾಯಿಲೆಗೆ ಎಡೆಮಾಡಿಕೊಡಬಹುದು.

ಆರೋಗ್ಯದಲ್ಲಿ ಬದಲಾವಣೆ: ಮಕ್ಕಳು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರೆ ಅದು ಶರೀರದ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಬಹುದು. ಪದೇ ಪದೇ ತಲೆನೋವು, ಕುತ್ತಿಗೆ ನೋವು, ನಿದ್ದೆಭಂಗ, ಸುಸ್ತು, ಕಡಿಮೆ ಶಕ್ತಿ ಮೊದಲಾದವು ತೋರಬಹುದು. ಮಕ್ಕಳಲ್ಲಿ ಇಂತಹ ಲಕ್ಷಣ ಕಂಡುಬಂದರೆ ತಕ್ಷಣವೇ ಪೋಷಕರು ಕಾರ್ಯಪ್ರವೃತ್ತವಾಗಬೇಕು.

ಇಂತಹ ಸನ್ನಿವೇಶದಲ್ಲಿ ಪೋಷಕರು ಸಾಧ್ಯವಾದಷ್ಟು ಮಕ್ಕಳೊಂದಿಗೆ ಬೆರೆಯುತ್ತಿರಬೇಕು ಮತ್ತು ಮಕ್ಕಳಲ್ಲಿ ಮುಕ್ತವಾಗಿ ಮಾತನಾಡಬೇಕಾಗುತ್ತದೆ. ಮಕ್ಕಳು ಮಾನಸಿಕವಾಗಿ ದುರ್ಬಲರಾದರೆ ಅವರಿಗೆ ಹೆಚ್ಚೆಚ್ಚು ಪ್ರೀತಿ, ವಿಶ್ವಾಸ ತೋರಿಸಿ. ಮಕ್ಕಳ ಜೊತೆ ತಾಳ್ಮೆ, ಸಂಯಮದಿಂದ ವರ್ತಿಸಿ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಬೈದು, ಹೊಡೆದು ಮಾಡಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು.
ಮಕ್ಕಳ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಆರಂಭದಲ್ಲಿಯೇ ವೃತ್ತಿಪರ ಮಾನಸಿಕ ತಜ್ಞರ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಿ. ಅಲ್ಲಿ ವೈದ್ಯರೊಂದಿಗೆ ವಿಸ್ತೃತವಾಗಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಿ.
Summary
ಮಕ್ಕಳ ಮಾನಸಿಕ ಆರೋಗ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
Article Name
ಮಕ್ಕಳ ಮಾನಸಿಕ ಆರೋಗ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
Description
ಮಕ್ಕಳು ಮಾನಸಿಕವಾಗಿ ದುರ್ಬಲರಾದರೆ ಅವರಿಗೆ ಹೆಚ್ಚೆಚ್ಚು ಪ್ರೀತಿ, ವಿಶ್ವಾಸ ತೋರಿಸಿ. ಮಕ್ಕಳ ಜೊತೆ ತಾಳ್ಮೆ, ಸಂಯಮದಿಂದ ವರ್ತಿಸಿ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಬೈದು, ಹೊಡೆದು ಮಾಡಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು.

LEAVE A REPLY

Please enter your comment!
Please enter your name here