ನವದೆಹಲಿ: ಮುಂದಿನ ತಿಂಗಳಿಂದ ಆರಂಭವಾಗಿ 7 ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶ ಮತದಾರರೆಲ್ಲಾ ಮತ ಚಲಾಯಿಸುವಂತೆ ಹುರಿದುಂಬಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷದ ನಾಯಕರು ಸೇರಿದಂತೆ ವಿವಿಧ ರಾಜಕೀಯ ನಾಯಕರು, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರಿಗೆ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಪ್ರತಿಪಕ್ಷದ ನಾಯಕರಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನ್ಯಾಷನಲ್​ ಕಾಂಗ್ರೆಸ್​ ಪಕ್ಷದ(ಎನ್​ಸಿಪಿ) ನಾಯಕ ಶರದ್​ ಪವಾರ್​, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​, ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್​ ಹಾಗೂ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರ ಹೆಸರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ. ಮತದಾರರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿ, ಇದರಿಂದ ನಮ್ಮ ಪ್ರಜಾಪ್ರಭುತ್ವ ಎಂಬ ಚೌಕಟ್ಟು ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸರಣಿ ಟ್ವೀಟ್​ ಮಾಡಿರುವ ಪ್ರಧಾನಿ ಸಿನಿಮಾ, ಉದ್ಯಮ, ಕ್ರೀಡೆ, ಮಾಧ್ಯಮ, ಧಾರ್ಮಿಕ ನಾಯಕರು ಸೇರಿದಂತೆ ಸಮಾಜದ ಎಲ್ಲ ರಂಗದ ಗಣ್ಯರ ಹೆಸರುಗಳನ್ನು ಟ್ಯಾಗ್​ ಮಾಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಕ್ರಿಕೆಟ್​ನಲ್ಲಿ ಉತ್ತಮ ದಾಖಲೆಗಳನ್ನು ದಾಖಲಿಸಿ ಹಲವರಿಗೆ ಸ್ಫೂರ್ತಿಯಾಗಿರುವಂತೆ ಈ ಚುನಾವಣೆಯಲ್ಲೂ ದಾಖಲೆಯ ಮತದಾನ ನಡೆಯಲು ಮತದಾರರನ್ನು ಹುರಿದುಂಬಿಸಿ ಸಚಿನ್​ ತೆಂಡೂಲ್ಕರ್​ ಎಂದು ಎಂ.ಎಸ್​.ಧೋನಿ, ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾರಿಗೆ ಪ್ರಧಾನಿ ಮನವಿ ಮಾಡಿದ್ದಾರೆ. ಹಾಗೇ ಪಿ.ವಿ.ಸಿಂಧು, ಸೈನಾ ನೆಹ್ವಾಲ್​ ಹಾಗೂ ಕಿಡಂಬಿ ಶ್ರೀಕಾಂತ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಸಿನಿಮಾ ಕ್ಷೇತ್ರದ ಪ್ರಮುಖ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್​, ಅನುಷ್ಕಾ ಶರ್ಮಾ ಹಾಗೂ ನಟರಾದ ಮಲೆಯಾಳಂ ನಟ ಮೋಹನ್​ ಲಾಲ್​, ಬಾಲಿವುಡ್​ ನಟರಾದ ಅಮಿತಾಬ್​ ಬಚ್ಚನ್​, ಸಲ್ಮಾನ್​ ಖಾನ್​, ಆಮೀರ್​ ಖಾನ್​, ಶಾರೂಕ್​​ ಖಾನ್​, ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್​ ಹಾಗೂ ವರುಣ್​ ಧವನ್​ ಸೇರಿದಂತೆ ಅನೇಕರ ಹೆಸರನ್ನು ಉಲ್ಲೇಖಿಸಿ ಮನವಿ ಮಾಡಿದ್ದಾರೆ.

ಧಾರ್ಮಿಕ ಕ್ಷೇತ್ರದ ಗಣ್ಯರಾದ ಶ್ರೀ ಶ್ರೀ ರವಿಶಂಕರ್​ ಗುರೂಜಿ, ಸದ್ಗುರು ಹಾಗೂ ಬಾಬಾ ರಾಮ್​ದೇವ್​ ಮತ್ತು ಉದ್ಯಮಿಗಳಾದ ರತನ್​ ಟಾಟಾ, ಆನಂದ್​ ಮಹೀಂದ್ರ ಹಾಗೂ ಆಶಿಶ್​ ಚೌಹಾಣ್​ ಸೇರಿದಂತೆ ಅನೇಕ ಗಣ್ಯರನ್ನು ಟ್ವೀಟ್​ ಮೂಲಕ ಮತದಾರರ ಜಾಗೃತಿಗಾಗಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here