ಚಳಿಗಾಲ ಶುರುವಾದ ಹೊತ್ತಿನಲ್ಲಿ ಮತ್ತೊಂದು ಗಾಳಿಪಟ ಹಿಡಿದು ನಿಂತಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌. 2008ರಲ್ಲಿ ತೆರೆಕಂಡ ‘ಗಾಳಿಪಟ’ ಚಿತ್ರದ ಸಿಕ್ವೇಲ್‌ ಸಿನಿಮಾ ಮಾಡಲು ಭಟ್ಟರು ತಯಾರಿ ನಡೆಸಿದ್ದು, ತಾರಾಗಣದಲ್ಲಿ ಭಾರೀ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದಿನ ಸಿನಿಮಾದಲ್ಲಿ ಗಣೇಶ್‌, ದಿಗಂತ್‌, ರಾಜೇಶ್‌ ಕೃಷ್ಣನ್‌ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಅವರ ಬದಲು ಬೇರೆ ಕಲಾವಿದರು ನಟಿಸಲಿದ್ದಾರೆ. ಯಾರಿಗೆ ಯಾವ ಪಾತ್ರ ಸಿಕ್ಕಿದೆ ಎನ್ನುವುದು ಸದ್ಯಕ್ಕೆ ಸೆಸ್ಪನ್ಸ್‌. ಆದರೆ, ಭಟ್ಟರ ಆಪ್ತರು ಒಂದಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ.

ಈ ಕುರಿತು ಲವಲವಿಕೆಯ ಜತೆ ಮಾತನಾಡಿದ ಯೋಗರಾಜ್‌ ಭಟ್‌. ‘ಗಾಳಿಪಟಕ್ಕೆ ಮೂವರು ನಾಯಕರಿದ್ದರು. ಅವರಿಗೆ ಮೂವರು ನಾಯಕಿಯರು. ಈ ಸಿನಿಮಾದಲ್ಲೂ ಅವರೆಲ್ಲ ಇರಲಿದ್ದಾರೆ. ಇದೊಂದು ಸೂಪರ್‌ ಕಾಂಬೋ ಸಿನಿಮಾ. ಕಥೆ ಅಂತಿಮವಾಗಿದೆ. ಚಿತ್ರಕಥೆ ಮಾಡುತ್ತಿದ್ದೇನೆ. ಉಳಿದಂತೆ ಕೆಲಸ ನಡೆಯುತ್ತಿದೆ. ಪಂಚತಂತ್ರ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ, ಹೊಸ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ಹಂಚಿಕೊಳ್ಳಲಾರೆ’ ಎಂದರು.

ಭಟ್ಟರ ಆಪ್ತರು ಹೇಳುವಂತೆ ನಾಯಕರೂ ಅಂತಿಮವಾಗಿದ್ದು ಶರಣ್‌, ಆಪರೇಷನ್‌ ಅಲಮೇಲಮ್ಮ ಖ್ಯಾತಿಯ ರಿಷಿ ಮತ್ತು ನಿರ್ದೇಶಕ ಲೂಸಿಯಾ ಪವನ್‌ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯರ ಹುಡುಕಾಟಕ್ಕೂ ಚಾಲನೆ ನೀಡಿದ್ದಾರೆ.

ಸದ್ಯ ಯೋಗರಾಜ್‌ ಭಟ್‌ ‘ಪಂಚತಂತ್ರ’ ಸಿನಿಮಾದಲ್ಲಿ ಬಿಝಿ ಆಗಿದ್ದು, ಮಂಗಳವಾರ ಸಿನಿಮಾದ ಬಹುತೇಕ ಶೂಟಿಂಗ್‌ ಮುಗಿಸಿದ್ದಾರೆ. ಈ ಚಿತ್ರವು ತೆರೆಯ ಕಾಣುವ ಹೊತ್ತಿಗೆ ‘ಗಾಳಿಪಟ 2’ ಚಿತ್ರದ ಹಲವು ಸಂಗತಿಗಳನ್ನು ಹಂಚಿಕೊಳ್ಳಲಿದ್ದಾರಂತೆ. ಮೊದಲಿನಿಂದಲೂ ಯೂತ್ಸ್‌ ಇಷ್ಟಪಡುವಂತಹ ಕಥೆಗಳನ್ನೇ ಸಿನಿಮಾ ಮಾಡುತ್ತಾ ಬಂದಿರುವ ಇವರು, ಈ ಸಿನಿಮಾದಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಈ ಸಿನಿಮಾ ಕೂಡ ನಗಿಸುತ್ತಲೇ, ಭಾವುಕರನ್ನಾಗಿಸುವ ಕಥೆಯನ್ನು ಒಳಗೊಂಡಿದೆಯಂತೆ.

LEAVE A REPLY

Please enter your comment!
Please enter your name here