ಚಿಕ್ಕಮಗಳೂರು

ಡಿಸೆಂಬರ್ 06: ಸದಾ ಹಚ್ಚಹಸಿರಿನಿಂದ ಕೂಡಿರುವ ಕಾಫಿನಾಡು ಚಿಕ್ಕಮಗಳೂರು ಅನೇಕ ಪ್ರವಾಸಿ ತಾಣಗಳಿಗೆ ಹೆಸರುವಾಸಿ. ಇಲ್ಲಿನ ವಾತಾವರಣ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಕಲ್ಪನೆಗಳಿಗೆಲ್ಲಾ ಜೀವ ತುಂಬುತ್ತದೆ. ಇಲ್ಲಿ ಆಗಾಗ ಗ್ರಾಮೀಣ ಕ್ರೀಡೆಗಳು ನೋಡುಗರ ಮನಸೊರೆಗೊಳಿಸಿದರೆ ಕೆಲವು ಸಮಯ ಆಧುನಿಕ ಕ್ರೀಡೆಗಳ ಭರಾಟೆಯೂ ಜೋರಾಗಿರುತ್ತದೆ. ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ಕಾಫಿ ಡೇ ಸಾರಥ್ಯದಲ್ಲಿ ನಡೆದ ಇಂಡಿಯನ್ ಕಾರ್ ರಾಲಿ ಹಾಗೂ ಏಷ್ಯಾ ಕಪ್ ಕಾರ್ ರೇಸ್ ಸ್ಪರ್ಧೆ ನೋಡುಗರ ಮೆಚ್ಚುಗೆಗೆ ಪಾತ್ರವಾಯ್ತು. ವೇಗವಾಗಿ ಧೂಳೆಬ್ಬಿಸುತ್ತಾ ಸಾಗುವ ಕಾರುಗಳು, ಸಹ ಸವಾರನ ಪ್ಲಾನ್ ಗೆ ತಕ್ಕಂತೆ ಎಕ್ಸಲೇಟರ್ ಮೇಲೆ ಕಾಲಿಡುತ್ತಿರೊ ಚಾಲಾಕಿ ಸವಾರ, ತಿರುವುಗಳಲ್ಲಿ ನೋಡುಗರ ತಲೆ ತಿರುಗುವಂತೆ ಓಡುತ್ತಿರುವ ಕಾರುಗಳ ಕಂಡು ಹುಚ್ಚೆದ್ದು ಕುಣಿಯುತ್ತಿರೋ ಪ್ರೇಕ್ಷಕರು.

ಹೌದು, ಇದೆಲ್ಲಾ ಚಿಕ್ಕಮಗಳೂರು ಮೋಟಾರ್ ಸ್ಫೋರ್ಟ್ಸ್ ಕ್ಲಬ್ ಆಯೋಜಿಸಿರುವ ಕಾಫಿ ಡೇ ಪ್ರಾಯೋಜಿತ ಇಂಡಿಯನ್ ರಾಲಿ ಚಾಂಪಿಯನ್ ಷಿಪ್ ಹಾಗೂ ಏಷ್ಯಾ ಕಪ್ 2015 ರ ಕಾರ್ ರಾಲಿಯಲ್ಲಿ ಕಂಡು ಬಂದ ಕೆಲ ಝಲಕ್ ಗಳು.

Rallyಯಲ್ಲಿದ್ದ ಕಾರುಗಳು: ಈ ರಾಲಿಯಲ್ಲಿ ಒಂದಲ್ಲ, ಎರಡಲ್ಲ ಹತ್ತು ಹಲವು ರೇಸ್ ಕಾರ್ ಗಳಿವೆ. ಮಾರುತಿ ಎಸ್ಟೀಮ್, ಮಾರುತಿ ಬೊಲೆರೋ, ಮೀಟ್ಸ್ ಮೀಷನ್, ಓಕ್ಸ್ ಪೋಲೋ, ಮಹಿಂದ್ರಾ ಅಡ್ವೆಂಚರಸ್ ಮುಂತಾದ ಕಾರುಗಳು ಅಖಾಡಕ್ಕಿಳಿದಿದ್ದವು.

ಸಭಿಕರನ್ನು ರಂಜಿಸಿದ ಚಾಲಕರು: ಮೊದಲ ದಿನ ಚಿಕ್ಕಮಗಳೂರಿನ ಅಂಬರ್ ವ್ಯಾಲಿ ರೆಸಿಡೆನ್ಸಿ ಶಾಲಾ ಆವರಣದಲ್ಲಿ ನಡೆದ ಮೊದಲ ಸುತ್ತಿನಲ್ಲಿ ಪ್ರೇಕ್ಷಕರ ಮನೋರಂಜನೆಗಾಗಿ ಸಿದ್ಧಪಡಿಸಿದ ಟ್ರ್ಯಾಕ್ ನಲ್ಲಿ ಸ್ಪರ್ಧಾಳುಗಳು ಮೈನವಿರೇಳಿಸೋ ಪ್ರದರ್ಶನ ತೋರಿಸಿದರು. 2.8 ಕಿ.ಮೀ. ವ್ಯಾಪ್ತಿಯ ಅಂಕುಡೊಂಕಿನ ಮಣ್ಣಿನ ಹಾದಿಯಲ್ಲಿ ಚಾಲಕರ ಚಾಕಚಕ್ಯತೆಯಿಂದ ಕಾರು ಓಡಿಸಿ ಸಭೀಕರನ್ನು ರಂಜಿಸಿದರು.

ಹೆಸರು ನೊಂದಾಯಿಸಿದ್ದವರಲ್ಲಿ 40ಕ್ಕೂ ಹೆಚ್ಚು ದೇಶ-ವಿದೇಶದ ಸ್ಪರ್ಧಿಗಳೂ ಇದ್ದರು. ಎರಡು ವರ್ಷದ ಹಿಂದೆ ಏಷ್ಯಾನ್ ಫೆಸಿಫಿಕ್ ರಾಲಿಯಲ್ಲಿ ಮೊದಲ ಸ್ಥಾನ ಪಡೆದ ಮಹೇಂದ್ರ ಅಡ್ವೆಂಚರಸ್ ತಂಡದ ಗೌರವ್ ಗಿಲ್ ಮತ್ತು ಸಹ ಚಾಲಕ ಮೂಸಾ ಷರೀಫ್ ಕೂಡ ಭಾಗವಹಿಸಿದ್ದು ವಿಶೇಷ.

ನೋಡುಗರ ಎದೆಬಡಿತ ಹೆಚ್ಚಿಸುತ್ತಿತ್ತು: ಇನ್ನು ಕಾಫಿ ತೋಟದೊಳಗಿನ ಕಿರಿದಾದ ರಸ್ತೆಗಳ ಮಧ್ಯೆ ಧೂಳ್ ಎಬ್ಬಿಸುತ್ತಾ ಸಾಗ್ತಿರೋ ಕಾರುಗಳ ಓಟ ಎಲ್ಲರ ಮನ ಸೆಳೆಯಿತು. ಎಗ್ಗಿಲ್ಲದೆ ನುಗ್ಗಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಮಿಂಚಿ ಮರೆಯಾಗ್ತಿರೋ ಕಾರುಗಳು. ಕಾಫಿ ತೋಟದೊಳಗಿನ ಕಿರಿದಾದ ರಸ್ತೆಯಲ್ಲಿ ಸಾಗ್ತಿರೋ ಕಾರುಗಳು ನೊಡುಗರ ಎದೆಬಡಿತ ಹೆಚ್ಚಿಸುತ್ತಿತ್ತು.

ಸಣ್ಣಪುಟ್ಟ ಅಪಘಾತವಾಯಿತು: 2ನೇ ದಿನ ಕಣದಲ್ಲಿದದ್ದು 40 ಸ್ಪರ್ಧಿಗಳು. ಇವರಲ್ಲಿ ಹಲವರ ಕಾರುಗಳು ತಾಂತ್ರಿಕ ದೋಷದಿಂದ ಹೊರಗುಳಿದರೆ ಇನ್ನೂ ಕೆಲವರ ಕಾರುಗಳು ಅಲ್ಲಲ್ಲೇ ಸಣ್ಣಪುಟ್ಟ ಅಪಘಾತಕೊಳಪಟ್ಟವು.

ಸಖತ್ ಖುಷಿ ಕೊಟ್ಟ Rally: ನಗರದ ಕಾಫಿ ಡೇ ಬಳಿಯಿಂದ ಆರಂಭವಾದ ರಾಲಿ ಬೇಲೂರಿನ ಚಂದ್ರಾಪುರದ ಕಾಫಿ ಕಣಿವೆಗಳ ಮಧ್ಯೆ ಸಾಗಿತು. ರಾಷ್ಟ್ರಮಟ್ಟದ ರಾಲಿಯನ್ನು ನೋಡಲು ಸಾರ್ವಜನಿಕರು ಕೂಡ ಅಲ್ಲಲ್ಲೇ ಕಾದು ಕುಳಿತಿದ್ದಲ್ಲದೇ, ರಾಷ್ಟ್ರಮಟ್ಟದ ಕಾರು ಚಾಲಕರನ್ನು ಕಂಡು ಪುಳಕಿತರಾದರು. ಇನ್ನು ಬಯಲು ಸೀಮೆ ಭಾಗದಲ್ಲಿ ನಡೆದ ರಾಲಿಯೂ ಸಹ ಪ್ರೇಕ್ಷಕರಿಗೆ ಸಖತ್ ಖುಷಿ ಕೊಟ್ಟಿತು.

:

LEAVE A REPLY

Please enter your comment!
Please enter your name here