ಬೆಂಗಳೂರು

ಡಿಸೆಂಬರ್ 06 : ಮೇಕೆದಾಟು ಯೋಜನೆ ವಿಚಾರದಲ್ಲಿ ಚರ್ಚೆ ನಡೆಸಲು ಸಚಿವ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಗುರುವಾರ ಕರ್ನಾಟಕದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆ.ಪಳನಿಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಲು, ದಿನಾಂಕ ನಿಗದಿ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ಜಲ ಮಂಡಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟಿನ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ, ಈ ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತವಾಗಿದೆ.

ಆದರೆ, ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ. ಆದ್ದರಿಂದ, ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ? ಸಚಿವ ಡಿ.ಕೆ.ಶಿವಕುಮಾರ್ ಅವರು ಪತ್ರದಲ್ಲಿ ಕಾವೇರಿ ನದಿ ತಮಿಳುನಾಡು ಮತ್ತು ಕರ್ನಾಟಕದ ಜೀವನಾಡಿಯಾಗಿದೆ. ಎರಡೂ ರಾಜ್ಯಗಳು ಕಾವೇರಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವಿವರಣೆ ನೀಡಿದ್ದಾರೆ.

ಹೆಚ್ಚುವರಿ ನೀರು ಬಳಕೆ:  ಮಳೆಗಾಲದಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಬಳಸಿಕೊಂಡು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆ ಬಗ್ಗೆ ವಿವರಣೆ ನೀಡಲು ಸಮಯಾವಕಾಶ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮೇಕೆದಾಟು ಯೋಜನೆಗೆ ವಿರೋಧ: ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ನ್ಯಾಯಮಂಡಳಿಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತು ವಾದ-ವಿವಾದ ನಡೆಯುವಾಗ ಕರ್ನಾಟಕ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಯೋಜನೆ ಜಾರಿಯಿಂದಾಗಿ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆ ಆಗಲಿದೆ ಎಂದು ತಮಿಳುನಾಡು ಆತಂಕ ವ್ಯಕ್ತಪಡಿಸಿದೆ.

ಕರ್ನಾಟಕದ ವಾದವೇನು? ಕರ್ನಾಟಕ ಸರ್ಕಾರ ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನಂತೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಈ ನೀರನ್ನು ಹರಿಸಲಾಗುತ್ತದೆ. ಆದರೆ, ವಾಡಿಕೆಯಷ್ಟು ಮಳೆಯಾದಲ್ಲಿ 80 ರಿಂದ 90 ಟಿಎಂಸಿ ಅಡಿಯಷ್ಟು ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಅದನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದೆ.

:

LEAVE A REPLY

Please enter your comment!
Please enter your name here