ಮೈಸೂರು : ಅತಿ ದೊಡ್ಡ ಬಡಾವಣೆ ಎಂದೇ ಗುರುತಿಸಿಕೊಂಡಿರುವ ವಿಜಯನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಸ್ಥಳವಿಲ್ಲದಂತಾಗಿದೆ !

ಬೋಗಾದಿ- ವಿಜಯನಗರ ಸುತ್ತಮುತ್ತಲಿನ 12 ಬಡಾವಣೆಗಳಿಗೆ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಸ್ಥಳವೇ ಇಲ್ಲ. ಇದರಿಂದ ಬೋಗಾದಿಯ ಐತಿಹಾಸಿಕ ನಿಂಗರಾಜ ಕಟ್ಟೆಗೆ ಕಂಟಕ ಎದುರಾಗಿದೆ.

ಹಲವು ದಿನಗಳು ಕಳೆದರು ತ್ಯಾಜ್ಯ ವಿಲೇವಾರಿಯಾಗದ ಕಾರಣ ತ್ಯಾಜ್ಯ ರಾಶಿ ಬೆಟ್ಟದಂತಾಗುತ್ತಿದ್ದು, ಕಸದ ಸಮಸ್ಯೆ ಕಗ್ಗಂಟಾಗಿದೆ.

ಈ ಹಿಂದೆ ದೇಶದಲ್ಲೇ ನಂಬರ್‌ -1 ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರು ನಗರ ಪ್ರದೇಶಕ್ಕೆ ಮಾತ್ರ ಸ್ವಚ್ಛತೆ, ಸೂಕ್ತ ತ್ಯಾಜ್ಯ ವಿಲೇವಾರಿ ಸೀಮಿತವಾಗುತ್ತಿದೆ. ಆದರೆ, ನಗರ ಹೊರ ಭಾಗದ ಕಸ ವಿಲೇವಾರಿ ತೀರದ ಸಮಸ್ಯೆಯಾಗಿ ಪರಿಣಮಿಸಿದೆ.

ವಿಜಯನಗರ ಎಲ್ಲಾ ಹಂತಗಳು, ಹಳ್ಳಿ ಬೋಗಾದಿ, ಬ್ಯಾಂಕ್‌ ಕಾಲನಿ, ರೈಲ್ವೆ ಕಾಲನಿ, ಎಸ್‌ಬಿಎಂ ಕಾಲನಿ, ರೂಪ ನಗರ, ಪ್ರೀತಿ ಬಡಾವಣೆ ಮತ್ತಿತರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇ ಮಾಡಲು ಸೂಕ್ತ ಸ್ಥಳವಿಲ್ಲದೆ ಪರದಾಡುವಂತಾಗಿದೆ. ಪ್ರಸ್ತುತ ಹಳ್ಳಿ ಬೋಗಾದಿಯ ನಿಂಗರಾಜ ಕಟ್ಟೆ ಕೆರೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಅಲ್ಲಿಂದ ಬೇರೆಡೆ ಸ್ಥಳಾಂತರಗೊಳ್ಳದ ಕಾರಣ ತ್ಯಾಜ್ಯವು ಅಲ್ಲೇ ಕೊಳೆತು ಸಾಂಕ್ರಮಿಕ ರೋಗ ಭೀತಿ ಉಂಟಾಗಿದೆ. ಇದರ ಸುತ್ತಮುತ್ತ ಅನೇಕ ಬಡಾವಣೆಗಳಿದ್ದು, ಅಲ್ಲಿನ ನಿವಾಸಿಗಳು ದುರ್ನಾತದೊಂದಿಗೆ ರೋಗದ ಆತಂಕ ಎದುರಿಸುತ್ತಿದ್ದಾರೆ.

ಬೋಗಾದಿ-ವಿಜಯನಗರ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಬಡಾವಣೆಗಳಿವೆ. ಈ ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಘಟಕವಿಲ್ಲದೆ ಬೋಗಾದಿಯ ಸ್ಮಶಾನ ಬಳಿ ಇರುವ ನಿಂಗರಾಜ ಕಟ್ಟೆ ಕೆರೆಯಲ್ಲೇ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ.

”2005-06ರವರೆಗೂ ವಿಜಯನಗರದ ರಾಜ ಕಾಲುವೆಯ ಬಳಿಯ ಖರಾಬು ಭೂಮಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತು. ಕಾರಣಾಂತರಗಳಿಂದ ಬೋಗಾದಿ ಗ್ರಾಮ ಪಂಚಾಯಿತಿಯು 2010-11ರಿಂದ ಬೋಗಾದಿ ನಿಂಗರಾಜ ಕಟ್ಟೆಯಲ್ಲಿ 12ಕ್ಕೂ ಹೆಚ್ಚು ಬಡಾವಣೆಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯ ಮೀತಿ ಮೀರಿದರೆ ಪಾಲಿಕೆ ತೋರಿದ ಸ್ಥಳಕ್ಕೆ ಕಸ ವಿಲೇವಾರಿ ಮಾಡುತ್ತೇವೆ. ಇಲ್ಲದಿದ್ದರೆ ಕೊಳತು ನಾರುತ್ತಿದೆ. ಇದರಿಂದ ನಿಂಗರಾಜ ಕಟ್ಟೆ ಅವಸಾನದತ್ತ ಮುಖ ಮಾಡಿದೆ. ವಿಜಯನಗರ -ಬೋಗಾದಿಯಲ್ಲಿ ನೀರಿನ ಸಂಪನ್ಮೂಲ ಸಮೃದ್ಧವಾಗಿರಬೇಕಾದರೆ ಬೋಗಾದಿ ಕೆರೆ ಹಾಗೂ ನಿಂಗರಾಜ ಕಟ್ಟೆ ಸಮೃದ್ಧವಾಗಿರಬೇಕು. ಇಲ್ಲದಿದ್ದಲ್ಲಿ ನೀರಿಗೂ ಆಪತ್ತು ನಿಶ್ಚಿತ,” ಎಂದು ಬೋಗಾದಿ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯ ಕನ್ನೇಗೌಡ ಅವರ ಅಭಿಪ್ರಾಯ.

ರಾಜ ಕಾಲುವೆಯಲ್ಲಿ ತ್ಯಾಜ್ಯ 

”ನ್ಯೂ ಕಾಂತ್‌ ರಾಜ್‌ ಅರಸ್‌ ರಸ್ತೆಯಿಂದ ಬೋಗಾದಿ, ವಿಜಯನಗರ ಸುತ್ತಲಿನ ಅಂಗಡಿಗಳ ತ್ಯಾಜ್ಯ ಹೊರ ವರ್ತುಲ ರಸ್ತೆಯಲ್ಲೇ ರಾಶಿ ಬಿದ್ದಿದೆ. ರಾಜ ಕಾಲುವೆಯಲ್ಲೂ ತ್ಯಾಜ್ಯ ಸುರಿಯಲಾಗುತ್ತಿದೆ,” ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ದೂರು ಕೊಟ್ಟು ಸುಸ್ತಾಯ್ತು…

ಜಿಲ್ಲಾಧಿಕಾರಿ, ಮುಡಾ ಅಧ್ಯಕ್ಷರು, ಆಯುಕ್ತರು, ಪಾಲಿಕೆ ಆಯುಕ್ತರು… ಹೀಗೆ ಎಲ್ಲರಿಗೂ ದೂರು ನೀಡಿ ಸಾಕಾಯ್ತು. ಏನೂ ಪ್ರಯೋಜನ ಆಗುತ್ತಿಲ್ಲ. 2011ರಿಂದ ಇಲ್ಲಿವರೆಗೂ ಮನವಿ ಸಲ್ಲಿಸುತ್ತಿದ್ದೇನೆ. ಆದರೆ, ಕಸ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ,” ಎಂದು ಕನ್ನೇಗೌಡ ಬೇಸರ ವ್ಯಕ್ತಪಡಿಸಿದರು.

ವಿಜಯನಗರ ಹಾಗೂ ನಾವು ಅಭಿವೃದ್ಧಿಗೊಳಿಸಲಾದ ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಉಳಿದಿದ್ದು, ಪಾಲಿಕೆ ಹಾಗೂ ಆಯಾ ಗ್ರಾಮ ಪಂಚಾಯಿತಿಯವರು ನೋಡಿಕೊಳ್ಳುತ್ತಾರೆ. ವಿಜಯನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ.

-ಪಿ.ಎಸ್‌.ಕಾಂತರಾಜು ಆಯುಕ್ತ, ಮುಡಾ. 

Summary
ಮೈಸೂರು : 12 ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳವಿಲ್ಲ !
Article Name
ಮೈಸೂರು : 12 ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳವಿಲ್ಲ !
Description
''ನ್ಯೂ ಕಾಂತ್‌ ರಾಜ್‌ ಅರಸ್‌ ರಸ್ತೆಯಿಂದ ಬೋಗಾದಿ, ವಿಜಯನಗರ ಸುತ್ತಲಿನ ಅಂಗಡಿಗಳ ತ್ಯಾಜ್ಯ ಹೊರ ವರ್ತುಲ ರಸ್ತೆಯಲ್ಲೇ ರಾಶಿ ಬಿದ್ದಿದೆ. ರಾಜ ಕಾಲುವೆಯಲ್ಲೂ ತ್ಯಾಜ್ಯ ಸುರಿಯಲಾಗುತ್ತಿದೆ,'' ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. 

LEAVE A REPLY

Please enter your comment!
Please enter your name here