ಬಾಗಲಕೋಟ: ಸರಕಾರದ ಯೋಜನೆಯಡಿ ಕೊರೆಸಿ ಕೊಳವೆ ಬಾವಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸದಿರುವ ಅಧಿಕಾರಿಗಳ ಬಗ್ಗೆ ಜಿಲ್ಲೆಯ ರೈತರೊಬ್ಬರು ಟ್ವೀಟ್‌ ಮೂಲಕ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಈರುಳ್ಳಿ ಬೆಳೆ ಹಾನಿ ಕುರಿತು ರೈತರೊಬ್ಬರು ಟ್ವಿಟರ್‌ ಮೂಲಕ ಪ್ರಧಾನಿ ಗಮನ ಸೆಳೆದಿದ್ದರು. ಇದೀಗ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ರೈತ ಟೋಪಣ್ಣ ಹಳ್ಳಿ ಟ್ವೀಟ್‌ ಮೂಲಕ ಪ್ರಧಾನಿ ಮೋದಿ, ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಮೊರೆ ಹೋಗಿದ್ದಾರೆ.

ಮುತ್ತಲಗೇರಿ ಗ್ರಾಮದ ತಮ್ಮ 2 ಎಕರೆ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ 2017ರ ಫೆಬ್ರವರಿಯಲ್ಲಿ ಟೋಪಣ್ಣ ಬೋರ್‌ವೆಲ್‌ ಕೊರೆಸಿದ್ದರು. ನಂತರ ಬೋರ್‌ವೆಲ್‌ಗೆ ಹೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಅಧಿಕಾರಿಗಳು ನಾನಾ ಕಾರಣಗಳನ್ನೊಡ್ಡಿ ಸಂಪರ್ಕ ಒದಗಿಸಲಿಲ್ಲ. ಈ ಮಧ್ಯೆ ಒಣಬೇಸಾಯದಡಿ 2 ಜಮೀನಿನಲ್ಲಿ ಗೋವಿನ ಜೋಳದ ಕಟಾವು ಕೂಡ ರೈತ ಪೂರ್ಣಗೊಳಿಸಿದರು. ಇತ್ತೀಚೆಗೆ ಬಾದಾಮಿಗೆ ಭೇಟಿ ನೀಡಿದ್ದ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರಿಗೂ ಮನವಿ ನೀಡಲಾಗಿತ್ತು. ಟಿಸಿ ಅಳವಡಿಸುವಂತೆ ಜಿಲ್ಲಾಧಿಕಾರಿಗೆ ಕೂಡ ರೈತ ಮನವಿ ನೀಡಿದ್ದರು.

ಈ ಮನವಿಗಳಿಗೆ ಸ್ಪಂದನೆ ದೊರೆಯದ ಕಾರಣ ಆಕ್ರೋಶಗೊಂಡ ರೈತ ಟ್ವಿಟರ್‌ ಮೂಲಕ ಸಮಸ್ಯೆ ತಿಳಿಸುವ ಯತ್ನ ಮಾಡಿದ್ದಾರೆ. ‘ನಮ್ಮ ಬೋರ್‌ವೆಲ್‌ಗೆ ಕರೆಂಟ್‌ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಮಾನ್ಯರೇ, ರೈತನ ನೋವು ನಿಮಗೆ ಕಾಣಿಸುತ್ತಿಲ್ಲವೇ ?’ ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್‌ನ್ನು ಬಾಗಲಕೋಟ ಜಿಪಂ ಸಿಇಒ, ಜಿಲ್ಲಾಧಿಕಾರಿಯವರಿಗೂ ಟ್ಯಾಗ್‌ ಮಾಡಲಾಗಿದೆ. ಟ್ವೀಟ್‌ನಲ್ಲಿ ಹೊಲದ ಬಳಿ ಎಸೆಯಲಾಗಿರುವ ವಿದ್ಯುತ್‌ ಕಂಬಗಳ ವಿಡಿಯೋ ಪ್ರಕಟಿಸಲಾಗಿದೆ. ಸಾಮಾಜಿಕ ತಾಣದ ಮೂಲಕವಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಾರೆ ಎಂದು ಟೋಪಣ್ಣ ಟ್ವೀಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here