ಶಿರಹಟ್ಟಿ: ವಿಧಾನ ಸಭೆ ಸೇರಿ ಎಲ್ಲ ಇಲಾಖೆ ಕಚೇರಿಗಳಲ್ಲಿನ ಕಡತ ವ್ಯವಹಾರ ಹಾಗೂ ನ್ಯಾಯಾಲಯದಲ್ಲಿ ನ್ಯಾಯಾಧೀಶರು ನೀಡುವ ತೀರ್ಪು ಸೇರಿ ಮಾತೃ ಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ಮೂಲಕ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯಪಟ್ಟರು.

ಮಾಚೇನಹಳ್ಳಿ ಗ್ರಾಮದಲ್ಲಿ ನಡೆದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಇಂಥ ಸಮ್ಮೇಳನಗಳ ಮೂಲಕ ಕೂಗು ಹಾಕುವ ತಾಪತ್ರಯ ತಪ್ಪಿಲ್ಲ. ನಾಡಿನ 8 ಜನ ರಸಋಷಿ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳು ಕೊಡುಗೆಯಾಗಿ ನೀಡುವುದರ ಮೂಲಕ ಜ್ಞಾನಪೀಠ ಪುರಸ್ಕಾರ ಪಡೆದು ಕನ್ನಡ ಭಾಷೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮಾತ್ರ ಉಜ್ವಲ ಭವಿಷ್ಯವಿದೆ ಎಂಬ ಭ್ರಮೆ ಕಳಚಿ ತಾಯಿ ಭಾಷೆಯಾದ ಕನ್ನಡ ಕಲಿತು, ಅದೇ ಭಾಷೆಯಲ್ಲಿ ಕೆಎಎಸ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉನ್ನತ ಶ್ರೇಣಿಯ ಅಧಿಕಾರಿಗಳಾಗಿ ಕನ್ನಡ ಭಾಷೆಯ ಹಿರಿಮೆ, ಗರಿಮೆ ಹೆಚ್ಚಿಸುವ ಮನೋಭಿಲಾಷೆ ಪ್ರತಿಯೊಬ್ಬ ಕನ್ನಡಿಗರದ್ದಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಫಕೀರಸಿದ್ಧರಾಮ ಸ್ವಾಮೀಜಿ ಮಾತನಾಡಿ, ಮಾಚೇನಹಳ್ಳಿ ಕನ್ನಡ ಗಟ್ಟಿತನದ ಹಳ್ಳಿ. ಸೊಗಡಿನ ನೆಲದಲ್ಲಿ ಇಂಥ ಸಮ್ಮೇಳನಗಳನ್ನು ಏರ್ಪಡಿಸಿ ಕನ್ನಡ ಭಾಷೆಯ ಸ್ಥಾನಮಾನ ಹಾಗೂ ಭಾಷೆ ಬೆಳವಣಿಗೆಗೆ ಹಾಕುವ ಕೂಗು ಸರ್ಕಾರಕ್ಕೆ ಮುಟ್ಟಿಸಲು ಜನಪ್ರತಿನಿಧಿ ಇಚ್ಛಾಶಕ್ತಿ ತೋರಬೇಕು. ಜಗತ್ತಿನ ಆಗು-ಹೋಗುಗಳ ಅರಿವಿನ ಜ್ಞಾನ ಬರಬೇಕಾದರೆ ಪುಸ್ತಕ, ದಿನ ಪತ್ರಿಕೆ ಓದುವಂತಾಗಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಕೆ.ಎ. ಬಳಿಗೇರ, ಸರ್ವಾಧ್ಯಕ್ಷ ಸ್ಥಾನ ನೀಡಿ ಸರ್ವ ವಿಧದಲ್ಲೂ ಗೌರವಿಸಿದ ಗ್ರಾಮಸ್ಥರಿಗೆ ಸದಾ ಚಿರಋಣಿ ಎಂದರು. ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ, ಮುಖಂಡ ಎಸ್.ಬಿ. ಮಹಾಜನಶೆಟ್ಟರ, ಕಸಾಪ ತಾಲೂಕು ಅಧ್ಯಕ್ಷ ಎಂ.ಕೆ. ಲಮಾಣಿ. ಎಂ.ಎ. ಮಕಾನದಾರ, ಆರ್.ಎಸ್. ಬುರಡಿ, ರಫೀಕ್ ಕೆರಿಮನಿ, ಅಕ್ಬರ್ ಯಾದಗೀರ, ಗೂಳಪ್ಪ ಕರಿಗಾರ, ಫಕೀರೇಶ ರಟ್ಟಿಹಳ್ಳಿ, ಅಧಿಕಾರಿ ಆರ್.ಎಸ್. ಬುರಡಿ, ಸುರೇಶ ಕುಂಬಾರ, ಶಂಕರ ಮರಾಠೆ, ತಿಮ್ಮರಡ್ಡಿ ಮರಡ್ಡಿ ಇದ್ದರು.

ಸಮ್ಮೇಳನದ ನಿರ್ಣಯಗಳು…: 1) ತಾಲೂಕಿನ ಕಪ್ಪತಗುಡ್ಡ ಪ್ರದೇಶದಲ್ಲಿ ಸರ್ಕಾರ ಆಯುರ್ವೆದ ವಿಶ್ವವಿದ್ಯಾಲಯ ಸ್ಥಾಪಿಸಬೇಕು.

2) ಪದೇ ಪದೆ ಬರಗಾಲಕ್ಕೆ ತುತ್ತಾಗುತ್ತಿರುವ ಶಿರಹಟ್ಟಿ ತಾಲೂಕಿನ ರೈತರ ಅನುಕೂಲಕ್ಕಾಗಿ ಸರ್ಕಾರ ನೀರಾವರಿ ಯೋಜನೆ ಜಾರಿಗೊಳಿಸಬೇಕು.

3) ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸಿಕೊಡಲು ಮುಂದಾಗಬೇಕು.

Summary
ಶಿರಹಟ್ಟಿ : ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು !
Article Name
ಶಿರಹಟ್ಟಿ : ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು !
Description
ಕಸಾಪ ತಾಲೂಕು ಅಧ್ಯಕ್ಷ ಎಂ.ಕೆ. ಲಮಾಣಿ. ಎಂ.ಎ. ಮಕಾನದಾರ, ಆರ್.ಎಸ್. ಬುರಡಿ, ರಫೀಕ್ ಕೆರಿಮನಿ, ಅಕ್ಬರ್ ಯಾದಗೀರ, ಗೂಳಪ್ಪ ಕರಿಗಾರ, ಫಕೀರೇಶ ರಟ್ಟಿಹಳ್ಳಿ, ಅಧಿಕಾರಿ ಆರ್.ಎಸ್. ಬುರಡಿ, ಸುರೇಶ ಕುಂಬಾರ, ಶಂಕರ ಮರಾಠೆ, ತಿಮ್ಮರಡ್ಡಿ ಮರಡ್ಡಿ ಇದ್ದರು.

LEAVE A REPLY

Please enter your comment!
Please enter your name here