ಶ್ರೀನಗರ: ಜಮ್ಮು- ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕೆಲ್ಲಂ ಗ್ರಾಮದಲ್ಲಿ ಶನಿವಾರ ನಡೆದ ಎನ್​ಕೌಂಟರ್​ನಲ್ಲಿ ಭದ್ರತಾ ಪಡೆ ಐವರು ಉಗ್ರರನ್ನು ಹೊಡೆದುರುಳಿಸಿದೆ. ಉಗ್ರರು ಸಂಗ್ರಹಿಸಿದ್ದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಧ್ಯೆ, ಸ್ಥಳೀಯರು ಪ್ರತಿಭಟನೆ ನಡೆಸಿದ ಕಾರಣ ಭದ್ರತಾ ಪಡೆಗಳ ಜತೆ ಸಂಘರ್ಷ ಉಂಟಾಗಿದೆ.

ಉಗ್ರರು ಅವಿತಿರುವ ಖಚಿತ ಮಾಹಿತಿ ಮೇರೆಗೆ ಮುಂಜಾನೆ 6 ಗಂಟೆಗೆ ಗ್ರಾಮವನ್ನು ಸುತ್ತುವರಿದ ಭದ್ರತಾ ಪಡೆಗಳು ಕಾರ್ಯಾ ಚರಣೆ ಆರಂಭಿಸಿದವು. ಉಗ್ರರು ತಪ್ಪಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುಲ್ಗಾಮ್ಲ್ಲಿ ನಾಕಾಬಂದಿ ಏರ್ಪಡಿಸಲಾಗಿತ್ತು. ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಉಗ್ರರು ಅಡಗಿದ್ದ ಪ್ರದೇಶವನ್ನು ಸೇನೆ ಸುತ್ತುವರಿಯುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಪಡೆಗಳು ಇದಕ್ಕೆ ಪ್ರತಿದಾಳಿ ನಡೆಸಿದರು. ಸುಮಾರು ಆರು ತಾಸು ನಡೆದ ಗುಂಡಿನ ಕಾಳಗದಲ್ಲಿ ಐವರು ಭಯೋತ್ಪಾದಕರು ಹತರಾದರು ಎಂದು ಸೇನಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ. ಹತ ಉಗ್ರರು ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಸೇರಿದವರು ಎನ್ನಲಾಗುತ್ತಿದೆ. ಎನ್​ಕೌಂಟರ್ ನಡೆದ ಸ್ಥಳದಲ್ಲಿ ಯುದ್ಧಕ್ಕೆ ಬೇಕಾಗುವಷ್ಟು ಶಸ್ತ್ರಾಸ್ತ್ರಗಳನ್ನು ಈ ಉಗ್ರರು ಸಂಗ್ರಹಿಸಿದ್ದರು. ಎನ್​ಕೌಂಟರ್ ಸಂದರ್ಭದಲ್ಲಿ ಸ್ಥಳೀಯರು ಭದ್ರತಾ ಪಡೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.ಇದರಿಂದ ಯಾವುದೇ ಸಾವು-ನೋವು ಆಗಿಲ್ಲ ಎಂದು ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸೇನೆಯ ರಾಷ್ಟ್ರೀಯ ರೈಫಲ್ಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು- ಕಾಶ್ಮೀರದ ಪೊಲೀಸ್ ತಂಡ ಭಾಗವಹಿಸಿದ್ದವು.

ಗ್ರೆನೇಡ್ ದಾಳಿ, 11 ಮಂದಿಗೆ ಗಾಯ

ಶ್ರೀನಗರದ ಐತಿಹಾಸಿಕ ಲಾಲ್ ಚೌಕ್ ಪ್ರದೇಶದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಶಿಬಿರದ ಮೇಲೆ ಶಂಕಿತ ಉಗ್ರರು ಭಾನುವಾರ ಸಂಜೆ ಗ್ರೆನೇಡ್ ದಾಳಿ ನಡೆಸಿದ್ದು, 11 ಮಂದಿ ಗಾಯಗೊಂಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯ ನಾಲ್ವರು, ಸಿಆರ್​ಪಿಎಫ್​ನ ಮೂವರು ಯೋಧರು ಹಾಗೂ ಓರ್ವ ಮಹಿಳೆ ಸೇರಿ ನಾಲ್ವರು ನಾಗರಿಕರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪಲಾಡಿಯಂ ಸಿನಿಮಾ ಮಂದರಿದ ಬಳಿ ಇರುವ 132ನೇ ಸಿಆರ್​ಪಿಎಫ್ ಬಟಾಲಿಯನ್ ಮೇಲೆ ಅಪರಿಚಿತರು ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ ಎಂದು ಸಿಆರ್​ಪಿಎಫ್ ವಕ್ತಾರ ಸಂಜಯ್ ಶರ್ಮಾ ತಿಳಿಸಿದ್ದಾರೆ. ಶಂಕಿತ ಉಗ್ರರಿಗೆ ತೀವ್ರ ಹುಡುಕಾಟ ನಡೆಸಲಾಗಿದ್ದು, ನಗರದಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಕಾರ್ಯಾಚರಣೆ ಚುರುಕು

2019ರಲ್ಲಿ ಭದ್ರತಾ ಪಡೆಗಳ ಉಗ್ರ ದಮನ ಕಾರ್ಯ ಚುರುಕಾಗಿ ನಡೆಯುತ್ತಿದೆ. ಎಂಟು ಎನ್​ಕೌಂಟರ್​ಗಳು ನಡೆದಿದ್ದು, 16 ಉಗ್ರರು ಹತರಾಗಿದ್ದಾರೆ. ಗಣರಾಜ್ಯೋತ್ಸವ ಸಂದರ್ಭದಲ್ಲೇ ನಾಲ್ಕು ಎನ್​ಕೌಂಟರ್​ಗಳು ನಡೆದಿವೆ. ಹತ ಉಗ್ರರ ಪೈಕಿ 9 ಮಂದಿ ಸ್ಥಳೀಯರು. ಮೃತ ಉಗ್ರರು ಲಷ್ಕರ್-ಎ-ತೊಯ್ಬ (ಎಲ್​ಇಟಿ) ಜೈಷ್-ಎ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ್ದಾರೆ.

ಜನವರಿ 3 ಪುಲ್ವಾಮಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮೂವರು ಉಗ್ರರು ಎನ್​ಕೌಂಟರ್​ಗೆ ಬಲಿ. ಓರ್ವ ಯೋಧ ಹುತಾತ್ಮ.

ಜನವರಿ 8 ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರರನ ಹತ್ಯೆ.

ಜನವರಿ 12 ಕುಲ್ಗಾಮ್ಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಧಾರಿತ ಸ್ಪೋಟಕ ಸಾಧನಗಳನ್ನು ತಯಾರಿಸುವಲ್ಲಿ ನಿಷ್ಣಾತನಾದ ಉಗ್ರ, ಅಲ್ಬದರ್ ಸಂಘಟನೆಯ ಕಮಾಂಡರ್ ಜೀನತ್-ಉಲ್-ಇಸ್ಲಾಂ ಸೇರಿ ಇಬ್ಬರು ಉಗ್ರರು ಬಲಿ.

ಜನವರಿ 21 ಬದ್ಗಾಮ್ ಜಿಲ್ಲೇಲಿ ನಡೆದ ಎನ್​ಕೌಂಟರ್​ನಲ್ಲಿ 2 ಉಗ್ರರ ಹತ್ಯೆ.

ಜನವರಿ 23 ಬಾರಾಮೂಲ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರ ಬೇಟೆ.

ಜನವರಿ 26 ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೈಷ್-ಎ-ಮೊಹಮ್ಮದ್​ನ ಇಬ್ಬರು ಉಗ್ರರು ಹತ.

ಫೆಬ್ರವರಿ 6 ಪುಲ್ವಾಮಾ ಜಿಲ್ಲೆಯಲ್ಲಿ ಎಲ್​ಇಟಿಯ ಓರ್ವ ಉಗ್ರ ಎನ್​ಕೌಂಟರ್​ಗೆ ಬಲಿ.

ಫೆಬ್ರವರಿ 1 ಪುಲ್ವಾಮಾ ಜಿಲ್ಲೆಯಲ್ಲಿ ಜೆಇಎಂನ ಇಬ್ಬರು ಉಗ್ರರ ಹತ್ಯೆಗೈದ ಭದ್ರತಾ ಪಡೆ.

Summary
ಶ್ರೀನಗರ : ಕಾಶ್ಮೀರದಲ್ಲಿ 5 ಉಗ್ರರ ಬೇಟೆ !
Article Name
ಶ್ರೀನಗರ : ಕಾಶ್ಮೀರದಲ್ಲಿ 5 ಉಗ್ರರ ಬೇಟೆ !
Description
ಜನವರಿ 23 ಬಾರಾಮೂಲ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರ ಬೇಟೆ.

LEAVE A REPLY

Please enter your comment!
Please enter your name here