ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್  ಕೈ ಕೊಟ್ರೆ, ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಾವು ಕೈ ಕೊಡ್ತೇವೆ ಎಂಬ ಸಚಿವ ಸಾರಾಮಹೇಶ್ ಹೇಳಿಕೆ ಸರಿಯಲ್ಲ ಎಂದು ಸಂಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ರಾಹುಲ್ ಗಾಂಧಿ  ಕರ್ನಾಟಕದಲ್ಲಿ ಸ್ಪರ್ಧಿಸಬೇಕೆಂಬ ಆಸೆಯಿಂದ ಇಲ್ಲಿಯೇ ಸ್ಪರ್ಧಿಸಿ ಎಂದು ಆಹ್ವಾನ ನೀಡಿದ್ದೇವೆ. ಆದರೆ, ಅವರು ಇನ್ನೂ ತೀರ್ಮಾನ ಕೈಗೊಂಡಿಲ್ಲ, ಪ್ರಧಾನಿ ಮೋದಿ ಎರಡೆರಡು ಕಡೆ ನಿಂತಿರಲಿಲ್ಲವೇ? ಇವರು ಯಾಕೆ ನಿಲ್ಲಬಾರದು, ಅವರ ಅಜ್ಜಿ , ಅಮ್ಮ ಕರ್ನಾಟಕದಲ್ಲಿಯೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿರುವುದಾಗಿ ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮೋದಿ ಬಿಟ್ಟು ಬೇರೆ ಏನೂ ಇಲ್ಲ. ಇಲ್ಲಿಯವರೆಗೂ ಅವರಿಗೆ ಮೋದಿ ಮುಖವೇ ಬಂಡವಾಳ.  ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರಿಗೆ ಯಾವ ವರ್ಚಸ್ಸು ಇದೆ. ಸರ್ಜಿಕಲ್ ಸ್ಟೈಕ್ ಹೇಳಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ.ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗುತ್ತದೆ.ನಂಬಿಕೆ ಬಗ್ಗೆ ಹೆಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರಾ? ಅದನ್ನು ಬಿಟ್ಟು ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ತುಮಕೂರು ಉಳಿಸಿಕೊಳ್ಳಿ ಎಂದು ವರಿಷ್ಠರಿಗೆ ಹೇಳಿದ್ದೆ.  9 ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟು ಒಬ್ಬರಿಗೆ ಕೊಡಲಿಲ್ಲ ಎಂದರೆ ಚೆನ್ನಾಗಿರಲ್ಲ  ಅಂತಾ ಮಾತನಾಡಿದ್ದೇನೆ. ಸೆಂಟ್ರಲ್ ಕಮಿಟಿ ಸಭೆ ಮುಗಿದ ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here