ಮಂಗಳೂರು: ಭಾರತದಂತಹ ಪ್ರಗತಿಪರ ರಾಷ್ಟ್ರಗಳಲ್ಲಿ ಸಹಕಾರಿ ತತ್ವಕ್ಕಿಂತ ಶ್ರೇಷ್ಠ ತತ್ವ ಬೇರೊಂದಿಲ್ಲ. ಸಹಕಾರಿ ತತ್ವದಲ್ಲಿ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಲು ಸಾಧ್ಯ. ಆರ್ಥಿಕ ಚೈತನ್ಯಕ್ಕೆ ಸಹಕಾರಿ ತತ್ವ ಉತ್ತಮ ತಳಹದಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಂಗಳೂರಿನ ನೆಹರೂ ಮೈದಾನದ ಮೊಳಹಳ್ಳಿ ಶಿವರಾಯ ಸಭಾಂಗಣದಲ್ಲಿ ಶನಿವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿ 25 ವರ್ಷ ಪೂರೈಸಿದ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ರಜತ ಸಂಭ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಕ್ಷೇತ್ರಕ್ಕೆ ಶಕ್ತಿ: ಇದು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ನಡೆದಿರುವ ದಾಖಲೆಯ ಕಾರ್ಯಕ್ರಮ. ನನ್ನನ್ನು ಗುರು ಎಂದು ಒಪ್ಪಿಕೊಳ್ಳುವ ರಾಜೇಂದ್ರ ಕುಮಾರ್‌, ನನ್ನನ್ನೂ ಮೀರಿ ಬೆಳೆದಿದ್ದಾರೆ ಎಂಬುದು ಸಂತೋಷದ ವಿಚಾರ. ಇಲ್ಲಿ ರಾಜೇಂದ್ರ ಕುಮಾರ್‌ ನಿಮಿತ್ತ ಮಾತ್ರ. ಸಹಕಾರಿ ಕ್ಷೇತ್ರದ ವಿಜೃಂಭಣೆಯ ಕಾರ್ಯಕ್ರಮವಿದು. ಸಹಕಾರಿ ರಂಗಕ್ಕೆ ಡಾ. ರಾಜೇಂದ್ರ ಕುಮಾರ್‌ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಅವರು ಅಭಿನಂದಿಸಿದರು.

ಜ್ಞಾನವೇ ಸಾಕ್ಷರತೆ: ಸ್ವಸಹಾಯ ಸಂಘಗಳು ಹಾಗೂ ನವೋದಯ ಗುಂಪುಗಳಿಂದಾಗಿ ಮಹಿಳೆಯರ ಸಬಲೀಕರಣವಾಗಿದೆ. ವ್ಯವಹಾರ ಜ್ಞಾನವೇ ಸಾಕ್ಷರತೆಯ ಮೂಲ ಉದ್ದೇಶವಾಗಿದ್ದು, ಅಕ್ಷರ ಜ್ಞಾನ ಇಲ್ಲದ ಮಹಿಳೆಯರು ಕೂಡ ವ್ಯಾವಹಾರಿಕವಾಗಿ ಸಶಕ್ತರಾಗಿದ್ದಾರೆ. ಜೀವನ ಪರೀಕ್ಷೆಯನ್ನು ಎದುರಿಸುವ ಶಕ್ತಿಯನ್ನು ಸ್ವಸಹಾಯ ಗುಂಪುಗಳು ನೀಡಿವೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ ಎಂದರು.

ಶಾಶ್ವತ ಯೋಜನೆ: ಸಮಾವೇಶಕ್ಕೆ ಮುನ್ನ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಹೊರಟ ಬೃಹತ್‌ ಮೆರವಣಿಗೆಯನ್ನು ಉದ್ಘಾಟಿಸಿದ ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಸರಕಾರಗಳು ವೋಟಿನ ಬೇಟೆಗಾಗಿ ಮಾಡುವ ಕೃಷಿ ಸಾಲಮನ್ನಾದಂತಹ ತಾತ್ಕಾಲಿಕ ವ್ಯವಸ್ಥೆಗಳ ಬದಲಿಗೆ ಡಾ. ವೀರೇಂದ್ರ ಹೆಗ್ಗಡೆ, ಡಾ. ರಾಜೇಂದ್ರ ಕುಮಾರ್‌ ಶಾಶ್ವತ ವ್ಯವಸ್ಥೆ ಮಾಡಿದ್ದರಿಂದ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದರು.

ರಾಜಕಾರಣಿಗಳಿಗೆ ನಡುಕ ಬರುವ ರೀತಿಯಲ್ಲಿ ಸಮಾವೇಶ ನಡೆಯುತ್ತಿದೆ. ಅಧಿಕಾರವೇ ಸರ್ವೋಚ್ಛ ಎಂಬ ರಾಜಕೀಯ ವ್ಯವಸ್ಥೆಯ ನಡುವೆ ಸಹಕಾರಿ ರಂಗ ಅದನ್ನೂ ಮೀರಿ ಬೆಳೆದು ಚರ್ಚೆಗೆ ಗ್ರಾಸವಾಗಿದೆ. ರಾಜಕಾರಣಿಗಳು ಗೆದ್ದಾಗ ಆರಂಭದಲ್ಲಿ ಅಭಿನಂದನೆ ಸಿಗುತ್ತದೆ. ಬಳಿಕ ಅವರು ಯಾವ ಅಭಿನಂದನೆಗೂ ಅರ್ಹರೇ ಅಲ್ಲವಾಗಿ ಬಿಡುತ್ತಾರೆ. ಡಾ.ರಾಜೇಂದ್ರ ಕುಮಾರ್‌ 25 ವರ್ಷಗಳ ಸಾಧನೆ ಮಾಡಿದ ಬಳಿಕ ಅಭಿನಂದನೆ ಸ್ವೀಕರಿಸುತ್ತಿರುವುದು ಅವಿಸ್ಮರಣೀಯ ಎಂದರು.

ರಸಗೊಬ್ಬರ ಕಾರ್ಖಾನೆ: ರಾಜ್ಯ ಮಾರಾಟ ಮಹಾಮಂಡಲ ದಾವಣಗೆರೆಯಲ್ಲಿ ಸ್ಥಾಪಿಸಲುದ್ದೇಶಿರುವ ರಸಗೊಬ್ಬರ ಕಾರ್ಖಾನೆಗೆ ಕೇಂದ್ರ ಸರಕಾರ ಪೂರ್ಣ ಸಹಕಾರ ನೀಡಲಿದೆ. ಜತೆಗೆ ಸ್ಥಗಿತಗೊಂಡಿರುವ ಐದು ಹಳೆ ರಸಗೊಬ್ಬರ ಕಾರ್ಖಾನೆಗಳನ್ನು 16 ಸಾವಿರ ಕೋಟಿ ರೂ. ವಿನಿಯೋಗಿಸಿ ಪುನಶ್ಚೇತನಗೊಳಿಸಲಾಗುವುದು ಎಂದರು.

ಬಡವರ ಬಂಧುಗೆ ಚಾಲನೆ: ಸಹಕಾರ ಇಲಾಖೆಯ ‘ಬಡವರ ಬಂಧು’ ಯೋಜನೆಗೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಚಾಲನೆ ನೀಡಿ, ಕರಾವಳಿ ಪ್ರದೇಶದ ಅಭಿವೃದ್ಧಿಯಲ್ಲಿ ಸರಕಾರಿ ಯೋಜನೆಗಳ ಜತೆಗೆ ರಾಜೇಂದ್ರ ಕುಮಾರ್‌ ನೇತೃತ್ವದ ಸಹಕಾರಿ ಕ್ಷೇತ್ರ ಕೂಡ ಜನಸಾಮಾನ್ಯರಿಗೆ ಮೂಲಸೌಲಭ್ಯ ಕಲ್ಪಿಸಿ, ಮಹತ್ವದ ಕೊಡುಗೆ ನೀಡಿದೆ ಎನ್ನಲು ಹೆಮ್ಮೆ ಅನಿಸುತ್ತಿದೆ ಎಂದರು.

ಎಲ್ಲೋ ಮೂಲೆಯಲ್ಲಿ ನಡೆಯುತ್ತಿದ್ದ ಸಹಕಾರಿ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ಆಸ್ತಿಯ ಸ್ವಂತ ಕಟ್ಟಡ ನಿರ್ಮಾಣ, ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಸಮಾನತೆ, ಸ್ವಾವಲಂಬನೆ ತಂದಿರುವುದು ರಾಜೇಂದ್ರ ಕುಮಾರ್‌ ಅವರ ಹೆಗ್ಗಳಿಕೆ. 25 ವರ್ಷಗಳಲ್ಲಿ ಪ್ರತಿವರ್ಷವೂ ಶೇ.100 ಮರುಪಾವತಿ, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಬೇರೊಂದಿಗೆ ವ್ಯಕ್ತಿ, ಸಂಸ್ಥೆ ಇಲ್ಲ ಎಂದರು.

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಮಾತನಾಡಿ, ಇಲ್ಲಿಯ ಎಸ್‌ಸಿಡಿಸಿಸಿ ಬ್ಯಾಂಕ್‌ಗಳ ಸಹಿತ ಪ್ಯಾಕ್ಸ್‌ಗಳು ಮಾದರಿಯಾಗಿವೆ. ನವೋದಯ ಸಂಘ ದೇಶಕ್ಕೆ ಮಾದರಿಯಾಗಿದೆ. ಅವು ಇನ್ನಷ್ಟು ಬೆಳವಣಿಗೆ ಕಂಡು, ಇಲ್ಲಿಯ ಸಹಕಾರಿ ತಜ್ಞರು ಉತ್ತರ ಕರ್ನಾಟಕಕ್ಕೆ ಬಂದು ಅಲ್ಲಿಯ ಬ್ಯಾಂಕ್‌ಗಳ ಅಭಿವೃದ್ಧಿಗೂ ಮಾರ್ಗದರ್ಶನ ನೀಡಬೇಕು ಎಂದರು.

ರಾಜ್ಯ ಸರಕಾರ ಕಳೆದ ವರ್ಷ 50 ಸಾವಿರ ರೂ.ವರೆಗಿನ 8,165 ಕೋಟಿ ರೂ. ಕೃಷಿ ಸಾಲಮನ್ನಾ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 74,300 ರೈತರ 338 ಕೋಟಿ ರೂ. ಮನ್ನಾ ಮಾಡಲಾಗಿತ್ತು. ಈಗಿನ ಸಮ್ಮಿಶ್ರ ಸರಕಾರ 1 ಲಕ್ಷ ರೂ. ತನಕದ 9,448 ಕೋಟಿ ರೂ. ಮನ್ನಾ ಮಾಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ 91,858 ರೈತರ 705 ಕೋಟಿ ರೂ. ಮನ್ನಾ ಮಾಡಲಿದೆ. ಅದರಲ್ಲಿ 19,298 ರೈತರ 147 ಕೋಟಿ ರೂ. ಬಿಡುಗಡೆ ಮಾಡಿದೆ. ಎಲ್ಲ ರೈತರ ಸಾಲಮನ್ನಾ ಮಾಡಲು ಸರಕಾರ ಬದ್ಧವಾಗಿದೆ. ಸ್ವಸಹಾಯ ಗುಂಪಿನ ಗುಂಪಿನ ಮಹಿಳೆಯರಿಗೆ ಕಾಯಕ ಯೋಜನೆ ಮೂಲಕ 10 ಲಕ್ಷ ರೂ. ಸಾಲ ನೀಡಲಿದ್ದು, ಅದರಲ್ಲಿ 5 ಲಕ್ಷ ರೂ. ಬಡ್ಡಿ ರಹಿತ ಮತ್ತು ಉಳಿದ 5 ಲಕ್ಷ ರೂ.ಗೆ ಶೇ.4 ಬಡ್ಡಿ ವಿಧಿಸಲಾಗುತ್ತದೆ ಎಂದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಡಾ. ರಾಜೇಂದ್ರ ಕುಮಾರ್‌ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರಾಜ್ಯ ಸರಕಾರ ಎಲ್ಲ ರೈತರ ಸಾಲಮನ್ನಾ ಮಾಡಲೇಬೇಕು. ಸಾಲಮನ್ನಾದಿಂದ ಸಹಕಾರಿ ಕ್ಷೇತ್ರ ಸೊರಗಬಾರದು. ಕರಾವಳಿಯ ಬಿಜೆಪಿಯ ಎಲ್ಲ ಶಾಸಕರೂ ರಾಜೇಂದ್ರ ಕುಮಾರ್‌ ಅವರ ಜತೆಗಿದ್ದಾರೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯ ರಜತ ಸಂಭ್ರಮ ಮಾನವತೆಯ ಸಮಾವೇಶವಾಗಿ ಮಾರ್ಪಟ್ಟಿದೆ. ನವೋದಯ ಸಂಘವು ಮಾತೃಶಕ್ತಿಗೆ ಪುನಶ್ಚೇತನ ನೀಡಿ ಸ್ವಾಭಿಮಾನ ಮತ್ತು ಆತ್ಮ ಗೌರವ ನೀಡಿದೆ ಎಂದರು.

ರಜತ ಸಂಭ್ರಮ ಅಭಿನಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ, ಬೆಳಪು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ವಂದಿಸಿದರು. ಪತ್ರಕರ್ತರಾದ ಮನೋಹರ ಪ್ರಸಾದ್‌ ಮತ್ತು ಕೆ.ಸಿ. ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು.

Summary
ಸಹಕಾರಿ ತತ್ವಕ್ಕಿಂತ ಶ್ರೇಷ್ಠ ತತ್ವ ಬೇರೊಂದಿಲ್ಲ
Article Name
ಸಹಕಾರಿ ತತ್ವಕ್ಕಿಂತ ಶ್ರೇಷ್ಠ ತತ್ವ ಬೇರೊಂದಿಲ್ಲ
Description
ಜ್ಞಾನವೇ ಸಾಕ್ಷರತೆ: ಸ್ವಸಹಾಯ ಸಂಘಗಳು ಹಾಗೂ ನವೋದಯ ಗುಂಪುಗಳಿಂದಾಗಿ ಮಹಿಳೆಯರ ಸಬಲೀಕರಣವಾಗಿದೆ. ವ್ಯವಹಾರ ಜ್ಞಾನವೇ ಸಾಕ್ಷರತೆಯ ಮೂಲ ಉದ್ದೇಶವಾಗಿದ್ದು, ಅಕ್ಷರ ಜ್ಞಾನ ಇಲ್ಲದ ಮಹಿಳೆಯರು ಕೂಡ ವ್ಯಾವಹಾರಿಕವಾಗಿ ಸಶಕ್ತರಾಗಿದ್ದಾರೆ. ಜೀವನ ಪರೀಕ್ಷೆಯನ್ನು ಎದುರಿಸುವ ಶಕ್ತಿಯನ್ನು ಸ್ವಸಹಾಯ ಗುಂಪುಗಳು ನೀಡಿವೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ ಎಂದರು. 

LEAVE A REPLY

Please enter your comment!
Please enter your name here