ಪಿರಿಯಾಪಟ್ಟಣ

ಡಿಸೆಂಬರ್.08: ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿದ್ದ ಹುಲಿರಾಯ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದರಿಂದ ಸಾವಿನಿಂದ ಪಾರಾಗಿ ಬಂದಿದ್ದು, ಇದೀಗ ಮೈಸೂರಿನ ಕೂರ್ಗಳ್ಳಿಯಲ್ಲಿ ಹುಲಿ ಪುನರ್ವಸತಿ ಕೇಂದ್ರದಲ್ಲಿದ್ದಾನೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಪಿರಿಯಾಪಟ್ಟಣದ ಮುದ್ದನಹಳ್ಳಿ ಮೀಸಲು ಅರಣ್ಯದ ಶೆಟ್ಟಹಳ್ಳಿ ಅರಣ್ಯದ ಸಾಬರಹಳ್ಳ ಪ್ರದೇಶದಲ್ಲಿ ಯಾರೋ ಬೇಟೆಗಾರರು ಉರುಳು ಹಾಕಿದ್ದರು. ಇದೇ ಮಾರ್ಗವಾಗಿ ಬಂದ ಸುಮಾರು ಮೂರು ವರ್ಷದ ಗಂಡು ಹುಲಿ ಅದರಲ್ಲಿ ಸಿಲುಕಿತ್ತು.

ಉರುಳಿನಿಂದ ತಪ್ಪಿಸಿಕೊಂಡು ಹೋಗಲಾಗದೆ ಚೀರಾಡುತ್ತಾ ಅಲ್ಲಿಯೇ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿತ್ತು. ಎಂದಿನಂತೆ ಗಸ್ತಿನಲ್ಲಿ ತೆರಳಿದ ಅರಣ್ಯ ಸಿಬ್ಬಂದಿಗೆ ಇದ್ದಕ್ಕಿದ್ದಂತೆ ಹುಲಿಯ ಚೀರಾಟ ಕೇಳಿ ಬಂದಿದ್ದರಿಂದ ಶಬ್ದ ಬಂದ ಕಡೆಗೆ ತೆರಳಿ ನೋಡಿದಾಗ ಹುಲಿಯೊಂದು ಉರುಳಿಗೆ ಸಿಲುಕಿರುವುದು ಪತ್ತೆಯಾಗಿದೆ.

ಕೂಡಲೇ ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಎಸಿಎಫ್ ಸೋಮಪ್ಪ, ನಾಗರಹೊಳೆ ವನ್ಯಜೀವಿ ಎಸಿಎಫ್ ಪ್ರಸನ್ನಕುಮಾರ್, ವೈದ್ಯಾಧಿಕಾರಿ ಡಾ.ಮುಜೀಬ್ ಅಹಮದ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ.

ಅಲ್ಲದೆ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಉರುಳಿನಿಂದ ಬಿಡಿಸಿ ರಕ್ಷಿಸುವ ಸಲುವಾಗಿ ನಾಗರಹೊಳೆ ಉದ್ಯಾನವನದ ಹುಣಸೂರು ವಲಯದ ಸಣ್ಣಗದ್ದೆ ಕ್ಯಾಂಪಿನಲ್ಲಿದ್ದ ದಸರಾ ಆನೆಗಳಾದ ಬಲರಾಮ ಹಾಗೂ ಗಣೇಶ ಕರೆಯಿಸಿದ್ದು ಅವುಗಳ ಮೇಲೇರಿ ಶಾರ್ಪ್ ಶೂಟರ್ ಇನಾಯತ್ ಹಾಗೂ ಡಾ.ಮುಜೀಬ್ ಅವರು ಬಿದಿರು ಪೊದೆಯ ಉರುಳಿನಲ್ಲಿ ಸಿಲುಕಿದ ಹುಲಿಗೆ ಅರವಳಿಕೆ ನೀಡಿದ್ದು, ಪರಿಣಾಮ ಹುಲಿ ಪ್ರಜ್ಞೆ ಕಳೆದುಕೊಂಡಿದೆ. ಕೂಡಲೇ ಸಿಬ್ಬಂದಿ ಅದನ್ನು ಉರುಳಿನಿಂದ ಬಿಡಿಸಿ ಬೋನ್‌ಗೆ ಹಾಕಿ ಮೈಸೂರಿನ ಕೂರ್ಗಳ್ಳಿಯಲ್ಲಿ ಹುಲಿ ಪುರ್ನವಸತಿ ಕೇಂದ್ರಕ್ಕೆ ಸಾಗಿಸಿದ್ದಾರೆ.

ಈ ವೇಳೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಎನ್‌ಟಿಸಿಎ ರಾಜ್‌ಕುಮಾರ್, ಗೌರವ ವನ್ಯಜೀವಿ ಮಂಡಳಿಯ ಸದಸ್ಯೆ ಕೃತಿಕಾ, ಡಿಸಿಎಫ್ ವಿಜಯಕುಮಾರ್, ಎಸಿಎಫ್ ಗಳಾದ ಸೋಮಪ್ಪ, ಪ್ರಸನ್ನಕುಮಾರ್, ಆರ್‌ಎಫ್‌ಒಗಳಾದ ಸುರೇಂದ್ರ, ರತನ್‌ಕುಮಾರ್, ಡಿಆರ್‌ಎಫ್ ಸಿದ್ದರಾಜ್, ಎನ್‌ಜಿಒ ಲಿಫ್ಟ್ ಸಂಸ್ಥೆಯ ಲೊಕೇಶ್ ಸೇರಿದಂತೆ ಹಲವರು ಇದ್ದರು.

 

LEAVE A REPLY

Please enter your comment!
Please enter your name here