ಅಜ್ಜನ ಮನೆಯಲ್ಲಿದ್ದ 25 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ ಮೊಮ್ಮಗ ಮತ್ತು ಸ್ನೇಹಿತನನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಮಹಾಲಿಂಗ ಮಳಲಿ (19) , ಕಲ್ಲಪ್ಪ ಮೇಟಿ (30) ಬಂಧಿತ ಆರೋಪಿಗಳು.

ಮುಧೋಳ ತಾಲೂಕಿನ ಸಂಗಾನಟ್ಟಿ ಗ್ರಾಮದ 105 ವರ್ಷದ ಶಿವಪ್ಪ ಉಳ್ಳಾಗಡ್ಡಿ ಎಂಬ ವೃದ್ಧನ ಹಣವನ್ನು ಮೊಮ್ಮಗ ಮಹಾಲಿಂಗ ಮಳಲಿ ಹಾಗೂ ಆತನ ಸ್ನೇಹಿತ ಕಲ್ಲಪ್ಪ ಮೇಟಿ ಕದ್ದೊಯ್ದಿದ್ದರು. ಅಕ್ಟೊಬರ್ 19 ರಂದು ಕಳ್ಳತನವಾಗಿದೆ ಎಂದು ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಾಲಿಂಗ ಮಳಲಿ‌ ಮತ್ತು ಕಲ್ಲಪ್ಪ ಮೇಟಿ ದಿಢೀರ್ ಐಷಾರಾಮಿ ಜೀವನ‌ ಕಂಡು ಗ್ರಾಮಸ್ಥರಲ್ಲಿ ಸಂಶಯ ಮೂಡಿತ್ತು. ಬಳಿಕ ಈ ವಿಷಯ ಪೊಲೀಸರಿಗೆ ತಿಳಿಸಿದಾಗ ಯುವಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಹೊರಹಾಕಿದ್ದಾರೆ.

ಶಿವಪ್ಪ ಉಳ್ಳಾಗಡಿ ಅವರ ಪತ್ನಿ 14 ತಿಂಗಳ ಹಿಂದೆ ತೀರಿಕೊಂಡಿದ್ದರು. ಬಳಿಕ ಅಜ್ಜನ ಸೇವೆ ಮಾಡುವ ನಾಟಕವಾಡಿದ ಮೊಮ್ಮಗ ಮಹಾಲಿಂಗ ಸ್ನೇಹಿತನ ಜೊತೆ ಸೇರಿ ಈ ಕೃತ್ಯವೆಸಗಿದ್ದಾನೆ. ಮಹಾಲಿಂಗಪುರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here