ಕಾಸರಗೋಡು: ಇ- ವೇಸ್ಟ್‌ ನಿವಾರಣೆ ಚಟುವಟಿಕೆಗಳಲ್ಲಿ ನೂತನ ಹೆಜ್ಜೆಗಾರಿಕೆ ನಡೆಸಿರುವ ಜಿಲ್ಲಾ ಸ್ವಚ್ಛತಾ ಮಿಷನ್‌ನಿಂದ ಜಿಲ್ಲೆಯಿಂದ ಈ ಬಾರಿ 3926 ಕಿಲೋ ಇ-ವೇಸ್ಟ್‌ (ಎಲೆಕ್ಟ್ರಾನಿಕ್‌ ತ್ಯಾಜ್ಯ) ಸಂಗ್ರಹಿಸಲಾಗಿದೆ. 

ಪರಿಸರ ಮತ್ತು ಜೀವ ಜಾಲಕ್ಕೆ ಮಾರಕವಾಗಿರುವ ಅನೇಕ ಕಚ್ಚಾವಸ್ತುಗಳನ್ನು ಹೊಂದಿರುವ ಎಲೆಕ್ಟ್ರಾನಿಕ್‌ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವ ಯೋಜನೆ ಅಂಗವಾಗಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು, ಸರಕಾರಿ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿ ಇತ್ಯಾದಿ ಕಡೆಗಳಿಂದ ಇ-ವೇಸ್ಟ್‌ ಸಂಗ್ರಹ ಮಾಡಲಾಗಿತ್ತು. 

ಎರಡು ವರ್ಷ ಅವಧಿಯಲ್ಲಿ ಮೂರನೇ ಬಾರಿ ಎಲೆಕ್ಟ್ರಾನಿಕ್‌ ವೇಸ್ಟ್‌ ಸಂಗ್ರಹಿಸಲಾಗಿದೆ. ಯೋಜನೆಗೆ ಸಹಕಾರ ನೀಡಿದ ನಗರಸಭೆಗಳು, ಪಂಚಾಯಿತಿಗಳು ಉಪಯೋಗರಹಿತ ಕಂಪ್ಯೂಟರ್‌, ಪ್ರಿಂಟರ್‌ ಇತ್ಯಾದಿ ವಿದ್ಯುನ್ಮಾನ ಉಪಕರಣ ಇತ್ಯಾದಿಗಳನ್ನು ಸಂಗ್ರಹ ಕೇಂದ್ರವಾಗಿರುವ ಜಿಲ್ಲಾಧಿಕಾರಿ ಕಚೇರಿಗೆ ತಲಪಿಸಲಾಗಿತ್ತು. ಇವುಗಳನ್ನು ಪರಿಷ್ಕರಣೆ ಏಜೆನ್ಸಿಯಾಗಿರುವ ಕ್ಲೀನ್‌ ಕೇರಳ ಕಂಪನಿ ನಿಗಮಕ್ಕೆ ಹಸ್ತಾಂತರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಈ-ವೇಸ್ಟ್‌ ಸಹಿತ ಹೈದರಾಬಾದ್‌ನ ಪರಿಷ್ಕರಣೆ ಘಟಕಕ್ಕೆ ಹೊರಟ ಕ್ಲೀನ್‌ ಕೇರಳ ಕಂಪನಿಯ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ಹಸುರು ನಿಶಾನೆ ತೋರಿದರು. 

ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಹಿನಾ ಸಲೀಂ, ಜಿಲ್ಲಾ ಸ್ವಚ್ಛತಾ ಮಿಷನ್‌ ಸಂಚಾಲಕ ಬಿ. ರಾಧಾಕೃಷ್ಣನ್‌, ಸಹಾಯಕ ಅಭಿವೃದ್ಧಿ ಕಮಿಷನರ್‌(ಸಾಮಾನ್ಯ) ಬೆವಿನ್‌ ಜೋನ್‌, ಸಹಾಯಕ ಅಭಿವೃದ್ಧಿ ಕಮಿಷನರ್‌( ಪಿಒ) ಎನ್‌. ಹರಿಲಾಲ್‌, ಕಾರ್ಯಕ್ರಮ ಅಧಿಕಾರಿ ಕೆ.ವಿ. ರಂಜಿತ್‌ ಮತ್ತಿತರರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here