Pakistan ಜೈಲಿನಲ್ಲಿ 36 ವರ್ಷ ಇದ್ದು ಬಂದು, ಮತ ಚಲಾಯಿಸಿದರು

0
29

ಜೈಪುರ, ಡಿಸೆಂಬರ್ 8: ಒಂದೆರಡಲ್ಲ, ಬರೋಬ್ಬರಿ 36 ವರ್ಷಗಳು. ಅರಿವಿಲ್ಲದೆ ಭಾರತದ ಗಡಿ ದಾಟಿ ಹೋಗಿದ್ದ ಈ ವ್ಯಕ್ತಿ ಪಾಕಿಸ್ತಾನದ ಜೈಲಿನಲ್ಲಿದ್ದಾರೆ ಎಂಬುದು ತನಿಖೆ ಬಳಿಕ ಗೊತ್ತಾಗಿತ್ತು. ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಕೊನೆಗೂ ಬಿಡುಗಡೆಯಾಗಿ ಬಂದ ಈ ವ್ಯಕ್ತಿ 38 ವರ್ಷಗಳ ಬಳಿಕ ಶುಕ್ರವಾರ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಜೈಪುರದ ನಹಾರ್ಗಡ ಪ್ರದೇಶದ ಫಾತೆಹ್ರಾಮ್ ಕಾ ಟೀಬಾದ ನಿವಾಸಿ ಗಜಾನಂದ ಶರ್ಮಾ, 1980ರ ಲೋಕಸಭೆ ಚುನಾವಣೆ ನಂತರ ಮೊದಲ ಸಲ ಪತ್ನಿ ಮಖಾನಿ ದೇವಿ ಮತ್ತು ಹಿರಿ ಮಗ ಮುಕೇಶ್ ಶರ್ಮಾ ಜತೆಗೆ ಬ್ರಹ್ಮಪುರಿ ಪ್ರದೇಶದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮೂರೂವರೆ ದಶಕಗಳ ಹಿಂದೆ ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಿದ್ದ ಗಜಾನಂದ್, ಮೊದಲ ಬಾರಿಗೆ ಇವಿಎಂ ಕಂಡು ಅಚ್ಚರಿಪಟ್ಟರು. 1982ರಲ್ಲಿ ಗಜಾನಂದ ಶರ್ಮಾ ಕಣ್ಮರೆಯಾಗಿದ್ದರು. ಅಂತಾರಾಷ್ಟ್ರೀಯ ಗಡಿಯಲ್ಲಿ ಸಿಕ್ಕಿದ್ದ ಅವರನ್ನು ದಾಖಲೆ ಇಲ್ಲದೆ ಗಡಿಯೊಳಗೆ ಪ್ರವೇಶಿಸಿದ್ದ ಆರೋಪದಲ್ಲಿ ಪಾಕಿಸ್ತಾನ ಪಡೆಗಳು ಬಂಧಿಸಿ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಿದ್ದವು. ಸ್ಥಳೀಯ ಎನ್ ಜಿಓ, ರಾಜಕೀಯ ಪಕ್ಷಗಳ ನಿರಂತರ ಪ್ರಯತ್ನಗಳ ಬಳಿಕ ಅವರನ್ನು ಈ ವರ್ಷದ ಆಗಸ್ಟ್ 14ರಂದು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅವರು ಮನೆಗೆ ಮರಳಿದ ನಂತರ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿಗೆ ಮತ ಚಲಾಯಿಸಿದ್ದರ ಬಗ್ಗೆ ಹೇಳಿಕೊಳ್ಳಲು ಗಜಾನಂದ್ ಬಯಸಲಿಲ್ಲ. ಅವರಿಗೆ ದೇಶದಲ್ಲಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಹೀಗಾಗಿ ಪತ್ನಿ ಹೇಳಿದ ಗುರುತಿಗೆ ಬಟನ್ ಒತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

‘ನನಗೆ ನನ್ನ ಹೆಂಡತಿಯೇ ಸರ್ಕಾರ’ ಎಂದು ಹೇಳಿದ್ದಾರೆ. ಗಜಾನಂದ್ ಕಣ್ಮೆಯಾದಾಗಿನಿಂದ ಅವರ ಕುಟುಂಬದವರು ಮತ ಚಲಾಯಿಸಿರಲಿಲ್ಲವಂತೆ. 2013ರ ವಿಧಾನಸಭೆ ಮತ್ತು 2014ರ ಲೋಕಸಭೆಯಲ್ಲಿಯೂ ಮತ ಹಾಕಿರಲಿಲ್ಲ. ಈ ಬಾರಿ ಪತಿಯ ಜೊತೆಗೆ ಮತ್ತೆ ಮತದಾನ ಮಾಡಿದ ಖುಷಿಯನ್ನು ಮಖಾನಿ ದೇವಿ ಹಂಚಿಕೊಂಡರು.

LEAVE A REPLY

Please enter your comment!
Please enter your name here