ಉಡುಪಿ, ಡಿ 5: ಉಡುಪಿ, ಮಂಗಳೂರು ಅಥವಾ ದಕ್ಷಿಣಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಜಿಲ್ಲೆಗಳಲ್ಲಿ, ಅದು ಯಕ್ಷಗಾನವಿರಲಿ, ಲಕ್ಷದೀಪೋತ್ಸವೇ ಇರಲಿ ಅಥವಾ ಮೆರವಣಿಗೆಯಿರಲಿ ಅಲ್ಲಿ ಚೆಂಡೆಯ ಧ್ವನಿ ಮಾರ್ದನಿಸಲೇ ಬೇಕು.

ಚೆಂಡೆಯನ್ನು ಹೀಗೇ ಬಾರಿಸಬೇಕು ಎನ್ನುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಆದರೆ ಇದನ್ನೂ ಮೀರಿ ಚೆಂಡೆಯನ್ನು ಹೀಗೂ ಬಾರಿಸಬಹುದು ಎನ್ನುವುದನ್ನು ಉಡುಪಿ ಜಿಲ್ಲೆಯ ಯುವಕರ ತಂಡವೊಂದು ತೋರಿಸಿಕೊಟ್ಟಿದೆ.

ಉಡುಪಿ ಜಿಲ್ಲೆ ಕಾಪು ತಾಲೂಕು ವ್ಯಾಪ್ತಿಯಲ್ಲಿ ಬರುವ ಸುಭಾಷ್ ನಗರ ಎನ್ನುವಲ್ಲಿ ಹಗ್ಗಜಗ್ಗಾಟ (ಟಗ್ ಆಫ್ ವಾರ್) ಕ್ರೀಡೆಯನ್ನು ಆಯೋಜಿಸಲಾಗಿತ್ತು. ಅಲ್ಲಿ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲು ಚೆಂಡೆಯವರನ್ನು ಕರೆಸಲಾಗಿತ್ತು.

ಸ್ಥಳೀಯ ಯುವಕ ಚೇತನ್ ಹಾಡಿದ ಸಿನಿಮಾ ಹಾಡಿಗೆ ಸರಿಯಾಗಿ ಚೆಂಡೆಯವರೂ ರಾಗಕ್ಕೆ ತಕ್ಕಂತೆ ಚೆಂಡೆ ಬಾರಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚೇತನ್ ಹಾಡಿನ ತಾಳಕ್ಕೆ ತಕ್ಕಂತೆ ಚೆಂಡೆಯವರೂ ಬಾರಿಸಿದ ವಿಡಿಯೋ, ಸಾಮಾಜಿಕ ತಾಣದಲ್ಲಿ ಶಹಬ್ಬಾಸ್ ಗಿರಿ ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ಯುವಕರ ಚಂಡೆ ಬಳಗ ತಂಡ, ಕ್ರಿಯೇಟಿವಿಟಿ ಮೂಲಕ ಚಂಡೆಯನ್ನು ಬಾರಿಸುವ ಮೂಲಕ ಚಂಡೆ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.

ಸ್ಥಳೀಯ ಯುವಕ ಚೇತನ್, ಕನ್ನಡ, ತುಳು, ಹಿಂದಿ, ತಮಿಳು ಹಾಡಿನ ಜೊತೆಗೆ ವಾಶಿಂಗ್ ಪೌಡರ್ ನಿರ್ಮಾ.. ಹಾಲಿನಂತಹ ಹೊಳಪು ಎನ್ನುವ ಜಾಹೀರಾತನ್ನೂ ಹಾಡಿ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಅದಕ್ಕೆ ಸರಿಯಾಗಿ ಚೆಂಡೆಯವರೂ ಬಾರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here